ಕರಾವಳಿ

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ: ತಲೆ ಮೇಲೆ ಕಲ್ಲು ಎತ್ತಿಹಾಕಿ ವಲಸೆ ಕಾರ್ಮಿಕನ ಮರ್ಡರ್

Pinterest LinkedIn Tumblr

ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಭೀಕರ ಕೊಲೆಯಲ್ಲಿ ಅಂತ್ಯವಾದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಿನಮಕ್ಕಿ ಎಂಬಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.

ಬಾಗಲಕೋಟೆ ಮೂಲದ ಸಂಗೋಂದೇಪ್ಪ ಅಲಿಯಾಸ್ ಸಂಗಮೇಶ (42) ಕೊಲೆಯಾದ ವ್ಯಕ್ತಿ. ಈತನೊಂದಿಗೆ ಇದ್ದ ಇನ್ನೋರ್ವ ವಲಸೆ ಕಾರ್ಮಿಕ ಮಂಡ್ಯ ಮೂಲದ ರಾಜಾ (36) ಕೊಲೆ ಮಾಡಿದ ಆರೋಪಿ.

ಘಟನೆ ವಿವರ: ಸಂಗಪ್ಪ ಹಾಗೂ ರಾಜಾ ವಲಸೆ ಕಾರ್ಮಿಕರಾಗಿ ಕುಂದಾಪುರದಲ್ಲಿ ನೆಲೆಸುತ್ತಿದ್ದು ಕೆಲಸವಿದ್ದಾಗ ತೆರಳಿದ್ದಲ್ಲಿಯೇ ಉಳಿಯುತ್ತಿದ್ದರು. ಅಂತೆಯೇ ಆಲೂರು ಗ್ರಾ.ಪಂ ವ್ಯಾಪ್ತಿಯ ಕಟ್ಟಿನಮಕ್ಕಿಯ ನಾಗರಾಜ ಆಚಾರ್ ಎನ್ನುವರು ಗಾರೆ ಗುತ್ತಿಗೆ ಕೆಲಸ ಮಾಡುತ್ತಿದ್ದು ಆಗ್ಗಾಗೆ ಇವರ ಕೆಲಸದ ನಿಮಿತ್ತ ರಾಜಾ, ಸಂಗಮೇಶ ಹಾಗೂ ಸಂಗಡಿಗರು ಬರುತ್ತಿದ್ದರು. ಕಳೆದ ವಾರವೂ ಮೂರ್ನಾಲ್ಕು ದಿನ ಇವರೊಂದಿಗೆ ಕೆಲಸ ಮಾಡಿದ್ದು ಶನಿವಾರ ಸಂಬಳ ಪಡೆದು ಕುಂದಾಪುರಕ್ಕೆ ವಾಪಾಸ್ಸಾಗಿದ್ದರು. ಭಾನುವಾರ ಮತ್ತೆ ಕಟ್ಟಿನಮಕ್ಕಿಗೆ ಆಗಮಿಸಿ ನಾಗರಾಜ ಅವರ ಮನೆ ಎದುರು ನಿರ್ಮಾಣವಾಗುತ್ತಿದ್ದ ಮನೆಯ ಬಳಿ ಶೆಡ್ ನಲ್ಲಿ ಉಳಿದಿದ್ದರು. ಈ ವೇಳೆ ವಲಸೆ ಕಾರ್ಮಿಕರು ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕೆ ರಾಜಾ ಹಾಗೂ ಸಂಗಮೇಶನ ನಡುವೆ ಚಕಮಕಿ ನಡೆದಿದ್ದು ಸಂಗಮೇಶ ಶೆಡ್ ಎದುರಿನ ಮನೆ ಪಂಚಾಂಗದ ಮೇಲೆ ಮಲಗಿದ್ದಾಗ ರಾಜಾ ಆತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ. ಬಳಿಕ ಅಲ್ಲಿಯೇ ಸಮೀಪದಲ್ಲಿದ್ದ ದಣಿಯ ಮನೆಗೆ ಬಂದು ಮಾಹಿತಿ ನೀಡಿದ್ದು ಆತನನ್ನು ಹಿಡಿದಿಟ್ಟುಕೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಎ.‌ ಕಾಯ್ಕಿಣಿ, ಗಂಗೊಳ್ಳಿ ಠಾಣೆಯ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ, ತನಿಖಾ ವಿಭಾಗದ ಪಿಎಸ್ಐ ಜಯಶ್ರೀ ಹೊನ್ನೂರು, ಕೊಲ್ಲೂರು ಠಾಣೆ ತನಿಖಾ ಪಿಎಸ್ಐ ಸುಧಾರಾಣಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಫಾರೆನ್ಸಿಕ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗಂಗೊಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments are closed.