ಕರಾವಳಿ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಜಿ.ಪಂ ಸದಸ್ಯರಾದ ಬಾಬು ಹೆಗ್ಡೆ, ಶಂಕರ್ ಪೂಜಾರಿ, ಎಪಿಎಂಸಿ ಅಧ್ಯಕ್ಷ ವೆಂಕಟ್ ಪೂಜಾರಿ

Pinterest LinkedIn Tumblr

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಮುನಿಸಿನ ಬೆನ್ನಲ್ಲೇ ಜಿ.ಪಂ ಮಾಜಿ ಸದಸ್ಯರಿಬ್ಬರು, ಇಬ್ಬರು ಮಾಜಿ ತಾ.ಪಂ ಸದಸ್ಯರ ಸಹಿತ ನೂರಾರು ಮಂದಿ ಮುಖಂಡರು ಬಿಜೆಪಿ ತೊರೆದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.

ಬಿಜೆಪಿ ಹಿರಿಯ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ಬಾಬು ಹೆಗ್ಡೆ ತೆಗ್ಗರ್ಸೆ, ಬೈಂದೂರು ಜಿ.ಪಂ ಮಾಜಿ ಸದಸ್ಯ ಶಂಕರ್ ಪೂಜಾರಿ, ಮಾಜಿ ತಾ.ಪಂ ಸದಸ್ಯರಾದ ಸದಾಶಿವ ಪಡುವರಿ, ದಸ್ತಗಿರಿ ಸಾಹೇಬ್, ಕುಂದಾಪುರ ಎಪಿಎಂಸಿ ಅಧ್ಯಕ್ಷ ವೆಂಕಟ ಪೂಜಾರಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ದೀಪಕ್ ಶೆಟ್ಟಿ ನೂರಾರು ಮಂದಿ ಕಾಂಗ್ರೆಸ್ ಸೇರ್ಪಡೆಯಾದರು.

ಈ ಸಂದರ್ಭ ಮಾತನಾಡಿದ ಬಾಬು ಹೆಗ್ಡೆ, 35 ವರ್ಷದಿಂದ ಬಿಜೆಪಿಯಲ್ಲಿ ಕೆಲಸ ಮಾಡಿ ಪಕ್ಷದ ಶಾಸಕರು, ಸಂಸದರ ಚುನಾವಣೆಯಲ್ಲಿ ಕೆಲಸ ಮಾಡಿದ್ದು 2008ರಲ್ಲಿ ಬ್ಯಾಂಕ್ ನೌಕರಿಗೆ ರಾಜಿನಾಮೆ ನೀಡಿ ಸಕ್ರೀಯವಾದೆ. 2013ರಲ್ಲಿ ಪಕ್ಷದ ಟಿಕೆಟ್ ನೀಡುವುದಾಗಿ ಸುಳ್ಳು ಹೇಳಿದರು. 2018ರಲ್ಲಿ ಟಿಕೆಟ್ ನೀಡಿಲ್ಲ. ಈ ಬಾರಿಯೂ ಆಶ್ವಾಸನೆ ನೀಡಿ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿಸಲಾಯಿತು. ಬಿಜೆಪಿಯಲ್ಲಿ ಶಾಸಕ ಸ್ಥಾನದ ಸ್ಪರ್ಧಿಯಾಗಲು 10 ಮಾನದಂಡವಿದೆ. ಅದರಲ್ಲಿ ನನಗೆ ಯಾವುದು ಇಲ್ಲ ಎಂಬುದು ಇನ್ನೂ ಅರ್ಥವಾಗಿಲ್ಲ. ನಾನು ಸಾಲಗಾರ, ಸುಸ್ತಿದಾರ ಅಲ್ಲ. ಅವಿದ್ಯಾವಂತನೂ ಅಲ್ಲ ನಾನೊಬ್ಬ ಪದವೀಧರ. ಇನ್ನೂ ಅವಕಾಶವಿದೆ ಎಂಬ ಭರವಸೆ ಹೇಳಿ ಹೈಕಮಾಂಡ್ ನುಣುಚಿಕೊಳ್ಳುತ್ತದೆ. ಹಾಗಾದರೆ ಅವಕಾಶಕ್ಕಾಗಿ ಎಷ್ಟು ದಿನ ಕಾಯಬೇಕು..? ಅದಕ್ಕಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದೇನೆ. ನಂಬಿಸಿ ಮೋಸ ಮಾಡಿದ ಬಿಜೆಪಿಯ ಕುಯುಕ್ತಿ ಬಯಲಿಗೆಳೆಯುವ ಕೆಲಸ ಮುಂದಿನ ದಿನ ಮಾಡುವೆ. ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದಾಗ ಯಾವುದೇ ಷರತ್ತಿಲ್ಲದೆ ಸೇರ್ಪಡೆಯಾಗಿರುವೆ. ಈ ಚುನಾವಣೆಯಲ್ಲಿ ಗೋಪಾಲ ಪೂಜಾರಿಯವರನ್ನು ಗೆಲ್ಲಿಸಲು ಶ್ರಮವಹಿಸುತ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ನಂಬಿ ನೂರಾರು ಕಾರ್ಯಕರ್ತರು ಬಂದಿದ್ದು ಇಲ್ಲಿ ಹೊಸಬರು ಹಳಬರು ಪ್ರಶ್ನೆ ಬೇಡ. ಚುನಾವಣಾ ಸಮಯದಲ್ಲಿ ಕಷ್ಟಕಾಲದಲ್ಲಿ ಕೈ ಹಿಡಿದವರೆಲ್ಲರೂ ನಾಯಕರು. ಮನೆ ಕಟ್ಟಿದವರಿಗೆ ಬಿಜೆಪಿಯಲ್ಲಿ ಬೆಲೆಯಿಲ್ಲ. ಪಕ್ಷಕ್ಕೆ ಬರುವವರನ್ನು ಹೃದಯ ಶ್ರೀಮಂತಿಕೆಯಿಂದ ಬರಮಾಡಿಕೊಂಡು ಹಿರಿಯರ ಅನುಭವ, ಮಾರ್ಗದರ್ಶನದಲ್ಲಿ ಶ್ರಮವಹಿಸಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಕರೆನೀಡಿದರು.

ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ 12 ಮಂದಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ನಂಬಿಸಿತ್ತು. ಇದೀಗಾ ಆರ್.ಎಸ್.ಎಸ್ ಕುತಂತ್ರ ಎಲ್ಲರಿಗೂ ಅರಿವಾಗಿದೆ ಎಂದರು.

ಕಾಂಗ್ರೆಸ್ ನನ್ನ ಸ್ವಂತ ಮನೆ. ಮೊದಲು 20-25 ವರ್ಷ ಕಾಂಗ್ರೆಸ್ಸಿನಲ್ಲಿದ್ದು ದುಡಿದ ಖುಷಿಯಿದೆ. ಬಿ.ಎಂ ಸುಕುಮಾರ್ ಶೆಟ್ಟಿಯವರು ಕರೆದಾಗ ಅವರ ಮೇಲಿನ ಗೌರವದಿಂದ ಬಿಜೆಪಿ ಸೇರಿದೆ. ಅವರು ಒಳ್ಳೆ ರೀತಿ ನಡೆಸಿಕೊಂಡರು. ಆದರೆ ಈ ಬಾರಿ ಬಿಜೆಪಿ ಪಕ್ಷವು ಸುಕುಮಾರ ಶೆಟ್ಟಿ, ಬಾಬು ಹೆಗ್ಡೆಯವರನ್ನು ನಡೆಸಿಕೊಂಡ ರೀತಿಯಿಂದ ಕಾರ್ಯಕರ್ತರ ಕಡೆಗಣನೆ ತಿಳಿದಿದೆ. ಅದಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ.
-ಶಂಕರ ಪೂಜಾರಿ

ಹಲವು ಬಾರಿ ಕಾಂಗ್ರೆಸ್ ಸೇರಲು ಬುಲಾವ್ ಇತ್ತು. ಇದೀಗಾ ಸುಸಮಯ ಎಂದು ಸೇರ್ಪಡೆಯಾಗಿರುವೆ. ಗೋಪಾಲ ಪೂಜಾರಿಯವರನ್ನು ಗೆಲ್ಲಿಸಲು ರಾತ್ರಿ ಹಗಲು ದುಡಿಯೋಣ.
– ವೆಂಕಟ ಪೂಜಾರಿ

1991ರಲ್ಲಿ ಬಿಜೆಪಿ ಸೇರಿದ ಬಳಿಕ 4 ಬಾರಿ ಗ್ರಾ.ಪಂ ಹಾಗೂ ಒಂದು ಬಾರಿ ತಾ‌ಪಂ ಸದಸ್ಯ, ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ 32 ವರ್ಷ ದೀರ್ಘಕಾಲದ ಸೇವೆ ಮಾಡಿದ್ದೆ. ಬಿಜೆಪಿಯಲ್ಲಿ ದೀರ್ಘಕಾಲದ ಸೇವೆಗೆ ಬೆಲೆಯಿಲ್ಲ. 50 ವರ್ಷದ ಮೇಲಿನವರಿಗೆ ಬಿಜೆಪಿಯಲ್ಲಿ ಬೆಲೆಯಿಲ್ಲ. ವೃದ್ಧಾಶ್ರಮಕ್ಕೆ ಸೇರಿಸಿದಂತೆ ಮೂಲೆಗುಂಪು ಮಾಡುತ್ತಾರೆ. ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ. ಗೋಪಾಲ ಪೂಜಾರಿ ಗೆದ್ದು ಸಚಿವರಾಗುತ್ತಾರೆ.
– ಸದಾಶಿವ ಪಡುವರಿ

Comments are closed.