ಕರಾವಳಿ

ವಿಧಾನಸಭಾ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ

Pinterest LinkedIn Tumblr

ಕುಂದಾಪುರ: ಐದು ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಶಾಸಕರ ಪತ್ರಿಕಾ ಹೇಳಿಕೆ ವಿವರ:
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಸತತವಾಗಿ ಒಟ್ಟು 5 ಅವಧಿಗೆ ನನ್ನನ್ನು ಬಹುನಿರೀಕ್ಷೆಯೊಂದಿಗೆ ಆಯ್ಕೆ ಮಾಡಿದ ನನ್ನ ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಮತದಾರ ಬಾಂಧವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ವಇಚ್ಚೆಯಿಂದ ಸ್ಪರ್ಧಿಸದ ಇರಲು ನಿಶ್ಚಯಿಸಿರುತ್ತೇನೆ. ನಾನು ವಿಧಾನಸಭಾ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ ಅತ್ಯಂತ ನಿಪ್ಪೆಯಿಂದ ನನ್ನ ಜವಾಬ್ದಾರಿಯನ್ನು ನಿರ್ವಹಿಸಿರುತ್ತೇನೆ, ಕುಂದಾಪುರ ವಿಧಾನಸಭಾ ಕ್ಷೇತ್ರವು ಬಹಳಷ್ಟು ಗ್ರಾಮೀಣ ಭಾಗಗಳನ್ನು ಹೊಂದಿರುವ ಕ್ಷೇತ್ರವಾಗಿದ್ದು, ಈ ಕ್ಷೇತ್ರದ ಎಲ್ಲಾ ವರ್ಗದ ಮತದಾರರಿಗೂ ತಮ್ಮ ಬೇಡಿಕೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟು ಅದರ ನೋವು ಸಂಕಷ್ಟಗಳಿಗೆ ಸ್ಪಂದಿಸಿ ಜನರ ಆಶೋತ್ತರಗಳನ್ನು ಇಡೇರಿಸಿದ ಸಂತೃಪ್ತಿ ನನಗಿದೆ. ಎಲ್ಲಾ ಐದೂ ಚುನಾವಣೆಗಳಲ್ಲಿಯೂ ನನ್ನನ್ನು ದಾಖಲೆ ಮತಗಳ ಅಂತರಗಳಿಂದ ಚುನಾಯಿಸಿ ಕಳುಹಿಸಿದ ಕ್ಷೇತ್ರದ ಎಲ್ಲಾ ಮತದಾರರನ್ನೂ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿ ಕ್ಷೇತ್ರದ ಮತದಾರರಿಂದ ಪ್ರೀತಿ ವಿಶ್ವಾಸ ಗಳಿಸಿದ ಬಗ್ಗೆ ನನಗೆ ಹೆಮ್ಮೆ ಇದೆ.

ಐದು ಬಾರಿ ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸುವ ಅವಧಿಯಲ್ಲಿ ನಡೆದ ಲೋಕಸಭಾ, ವಿಧಾನಸಭೆ, ವಿಧಾನಪರಿಷತ್‌, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿಗೆ ದುಡಿದಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ಪ್ರಮುಖರಿಗೆ ಹಾಗೂ ಅಭಿಮಾನಿಗಳಿಗೆ ನಾನು ಯಾವತ್ತೂ ಚಿರ ಋಣಿಯಾಗಿರುತ್ತೇನೆ.

ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ನನಗೆ ಮಾರ್ಗದರ್ಶನ ನೀಡಿದ ಹಾಗೂ ಸಹಕಾರ ನೀಡಿದ ಪಕ್ಷದ ಪ್ರಮುಖರಿಗೆ, ಎಲ್ಲ ಹಿರಿ- ಕಿರಿಯ ಸ್ನೇಹಿತರಿಗೆ, ಅಧಿಕಾರಿ ವರ್ಗದವರಿಗೆ, ಮಾಧ್ಯಮದವರಿಗೆ ಹಾಗೂ ಕ್ಷೇತ್ರದ ಎಲ್ಲ ಮತದಾರರಿಗೂ ನನ್ನ ಮನ: ಪೂರ್ವಕ ಕೃತಜ್ಞತೆಗಳು.
ಮತದಾರರು ನನ್ನ ಮೇಲೆ ಇಟ್ಟ ಪ್ರೀತಿ ಮತ್ತು ನಂಬಿಕೆಯೇ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಕರ್ತವ್ಯ ನಿರ್ವಹಿಸಲು ಪ್ರೇರಣೆಯಾಗಿದ್ದು, ಅದಕ್ಕಾಗಿ ನಾನು ನನ್ನ ಸಮಸ್ತ ಮತಬಾಂಧವರಿಗೂ ಮತ್ತೊಮ್ಮೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ನಾನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಭಾರತೀಯ ಜನತಾ ಪಾರ್ಟಿಯಿಂದ ಆಯ್ಕೆಯಾಗಲು ಅವಕಾಶ ಕೊಟ್ಟ ಪಕ್ಷಕ್ಕೂ ಹಾಗೂ ನಾನು ಪಕ್ಷೇತರರಾಗಿ ನಿಂತು ಗೆಲ್ಲಲು ಸಹಕರಿಸಿದ ಎಲ್ಲರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಈ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಎಲ್ಲಾ ಮತಬಾಂಧವರೂ ಸಹಕಾರ ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ.

ಹಾಲಾಡಿಯವರ ಈ ದಿಢೀರ್ ನಿರ್ಧಾರದಿಂದಾಗಿ ಅವರ ಅಪಾರ ಅಭಿಮಾನಿಗಳಿಗೆ ಗೊಂದಲದಲ್ಲಿದ್ದಾರೆ.

Comments are closed.