ಕರಾವಳಿ

ಹೊಂಬಾಡಿ-ಮಂಡಾಡಿಯಲ್ಲಿ ಗಂಗಾಕಲ್ಯಾಣ ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ; ಸವಲತ್ತು ವಿತರಣೆ

Pinterest LinkedIn Tumblr

ಕುಂದಾಪುರ: ಸಾಮಾನ್ಯ ಜನರಿಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ಹಾಗೂ ಇಲಾಖೆ ಕಠಿಬದ್ಧವಾಗಿದೆ. ಪ.ಜಾತಿ ಹಾಗೂ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವ ಉದ್ಯೋಗಕ್ಕಾಗಿ ದ್ವಿಚಕ್ರವಾಹನ, ಹಿಂದುಳಿದ ವರ್ಗದವರಿಗೆ ಹೊಲಿಗೆ ಯಂತ್ರ ನೀಡುವ ಕೆಲಸ ಮಾಡಲಾಗಿದೆ. ಮದ್ಯವರ್ತಿಗಳ ಹಾವಳಿಯಿಲ್ಲದೆ ಕೊಳವೆ ಬಾವಿ ನಿರ್ಮಾಣದ ಹಣವನ್ನು ನೇರ ಫಲಾನುಭವಿಗಳ ಖಾತೆಗೆ ಜಮಾ ಮಾಡುವ ನೇರ ಖಾತೆ ಯೋಜನೆ ಜಾರಿಗೆ ತರಲಾಗಿದ್ದು ಹೊಂಬಾಡಿ-ಮಂಡಾಡಿಯಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ಈ ಯೋಜನೆಗೆ ಚಾಲನೆಗೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಂದಾಪುರ ತಾಲೂಕಿನ ಹೊಂಬಾಡಿ ಮಂಡಾಡಿಯ ಸುಣ್ಣಾರಿ ಎಂಬಲ್ಲಿನ ಪ.ಪಂಗಡದ ಕುಸುಮ ಅವರ ನಿವಾಸದಲ್ಲಿ ಗಂಗಾಕಲ್ಯಾಣ ಯೋಜನೆಗೆ ಚಾಲನೆ ನೀಡಿದ ಬಳಿಕ ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯ ಜನರಿಗೆ ಸವಲತ್ತು ಸಿಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡುವ ಸಲುವಾಗಿ ಸರ್ಕಾರ ಸಾಕಷ್ಟು ಅನುದಾನಗಳನ್ನು ಬಿಡುಗಡೆ ಮಾಡುತ್ತಿದೆ. ಬಡವರ ಬದುಕು ಬದಲಾಗಬೇಕು. ಶ್ರೀಮಂತರ ಮಕ್ಕಳು ಮಾತ್ರವಲ್ಲದೆ ಕಡುಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಇಲಾಖೆ ಮೂಲಕವಾಗಿ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸರ್ಕಾರ ಈ ಬಜೆಟ್‌ನಲ್ಲಿ ಪ.ಜಾತಿ, ಪ.ಪಂಗಡದ ಇಲಾಖೆಗೆ ಮಾಮೂಲಿಗಿಂತ 2 ಸಾವಿರ ಕೋಟಿ ಜಾಸ್ಥಿ ನೀಡಿದ್ದು ಅದರ ಒಂದೊಂದು ಪೈಸೆಯೂ ಸಕಾರಣಕ್ಕೆ ವಿನಿಯೋಗವಾದಾಗ ಸರಕಾರದ ಶ್ರಮ ಸಾರ್ಥಕವಾಗುತ್ತದೆ. ಸರ್ಕಾರದ ಉದ್ದೇಶ ಸಫಲವಾಗಲು ಯೋಜನೆಯ ಅನುಷ್ಠಾನದಲ್ಲಿ ಉತ್ತಮ ಫಲಿತಾಂಶ ಬರಬೇಕಿದೆ. ಸರ್ಕಾರದ ಯೋಜನೆಯ ಜೊತೆಗೆ ಸಾರ್ವಜನಿಕರು ಕೈಜೋಡಿಸಿದಾಗ ಅಭಿವೃದ್ಧಿ ಸಾಧ್ಯ ಎಂದ ಅವರು, ಶ್ರದ್ಧೆ, ಅನುಭವ ಪಡೆಯುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಕಲ್ಪನೆಯಂತೆ ಮುಂದೆ ಸಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಿಲಾಯಿತು. ಹೊಲಿಗೆ ಯಂತ್ರ ಹಾಗೂ ತರಬೇತಿ ಪಡೆದವರಿಗೆ ಪ್ರಮಾಣಪತ್ರವನ್ನು ಸಚಿವರು ವಿತರಿಸಿದರು.

ಈ ಸಂದರ್ಭ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸವಿತಾ ಡಿ. ನಾಯ್ಕ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಧಾ, ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಂಕರ್ ಮಲ್ಲಾರ್, ಲಿಡ್ಕರ್ ಉಡುಪಿ ಜಿಲ್ಲಾ ಸಂಯೋಜಕ ವೆಂಕಟೇಶ್, ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ವಿಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಸ್ವಾಗತಿಸಿ, ಇಲಾಖೆಯ ಕುಂದಾಪುರ ಕಚೇರಿ ವ್ಯವಸ್ಥಾಪಕ ರಮೇಶ್ ಕುಮಾರ್ ನಿರೂಪಿಸಿ, ವಂದಿಸಿದರು.

Comments are closed.