ಕರಾವಳಿ

ಪ್ರಮೋದ್ ಮುತಾಲಿಕ್ ಸ್ಪರ್ಧೆ ನೋಟಿಗಾಗಿ ಹೊರತು, ಹಿಂದುತ್ವಕ್ಕಲ್ಲ: ಸಚಿವ ವಿ.ಸುನಿಲ್ ಕುಮಾರ್

Pinterest LinkedIn Tumblr

ಉಡುಪಿ: ಪ್ರಮೋದ್ ಮುತಾಲಿಕ್ ಹಿಂದುತ್ವಕ್ಕಲ್ಲ ನೋಟಿಗಾಗಿ ಕಾರ್ಕಳದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಸರಣಿ‌ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಕಾರ್ಕಳದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಅದೇ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ವಿ.ಸುನಿಲ್‌ ಕುಮಾರ್‌ ಪ್ರಮೋದ್‌ ಮುತಾಲಿಕ್‌ ವಿರುದ್ಧ ನೋಟಿಗಾಗಿ ಪ್ರಮೋದ್‌ ಮುತಾಲಿಕ್‌ ಚುನಾವಣೆಗೆ ನಿಲ್ಲುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಚಿವ ವಿ.ಸುನೀಲ್‌ ಕುಮಾರ್‌, “ಪ್ರಿಯ ಮುತಾಲಿಕ್ ಜೀ, ನೀವು ಆಮಿಷಕ್ಕೆ ಒಳಗಾಗಿಯೇ ಕಾರ್ಕಳದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೀರಿ ಎಂದು ನಮಗೆ ಮೊದಲೇ ಅನುಮಾನವಿತ್ತು. ಅದೀಗ ನಿಜವಾಗಿದೆ. ಸ್ವಂತ ಬುದ್ಧಿಯಿಂದ ನೀವು ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ” ಎಂದಿದ್ದಾರೆ.

“ನೀವು ಕಾರ್ಕಳದಿಂದ ಸ್ಪರ್ಧೆಗೆ ಇಳಿಯುವುದನ್ನು ನಾನು ಮೊದಲೇ ಸ್ವಾಗತಿಸಿದ್ದೇನೆ. ಈಗ ನಿಮಗೆ ತನು ಮನ ಧನ ಸಹಾಯ ಮಾಡುವವರೂ ಕಾರ್ಕಳಕ್ಕೆ ಬಂದು ಪ್ರಚಾರ ಮಾಡಲಿ ಎಂದು ನಾನು ಆಶಿಸುತ್ತೇನೆ. ನಿಮ್ಮ ಸ್ಪರ್ಧೆಯ ಉದ್ದೇಶ ಏನೆಂಬುದನ್ನು ಕೆಲ ದಿನಗಳ ಹಿಂದೆ ” ವೋಟು, ನೋಟು” ಹೇಳಿಕೆಯ ಮೂಲಕ ತಿಳಿಸಿದ್ದಿರಿ” ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ.

“ಈಗ ತನು ಮನ ಧನ ಸಹಾಯವಿದೆ ಎಂದು ಹೇಳುತ್ತಿದ್ದೀರಿ. ಒಟ್ಟಾರೆಯಾಗಿ ನಿಮ್ಮ‌ಈ ಸ್ಪರ್ಧೆಯ ಉದ್ದೇಶ ಕಾರ್ಕಳದ ಹಿತವಲ್ಲ, ಹಿಂದುತ್ವದ ಹಿತವಲ್ಲ, ಜನತೆಯ ಹಿತವೂ ಅಲ್ಲ. ಅದು ” ತನು- ಮನ-ಧನ” – ನೋಟಿಗಾಗಿ ಎಂಬುದು ನಿಮ್ಮ ಹೇಳಿಕೆಯಲ್ಲೇ ಸ್ಪಷ್ಟವಾಗಿದೆ” ಎಂದು ವಿ.ಸುನಿಲ್‌ ಕುಮಾರ್‌ ಆರೋಪಿಸಿದ್ದಾರೆ.

 

Comments are closed.