ಕರಾವಳಿ

ಸಾಲಿಗ್ರಾಮ ಪಟ್ಟಣ ಪಂಚಾಯತ್’ನಲ್ಲಿ ಪ್ರತಿಪಕ್ಷ ‘ಕೈ’ ಸದಸ್ಯರ ವಿರುದ್ಧ ದ್ವೇಷ ಧೋರಣೆ: ರವೀಂದ್ರ ಕಾಮತ್ ಸುದ್ದಿಗೋಷ್ಟಿ

Pinterest LinkedIn Tumblr

ಉಡುಪಿ: ಬಾಲ್ಯದಿಂದಲೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ತರುವಾಯ ರಾಜಕೀಯ ಜೀವನಕ್ಕೆ ಬಂದ ನಾನು ಜನಸೇವೆ ಮೂಲಕ ಮನೆಮನೆಗೆ ಪರಿಚಿತನಾಗಿರುವೆ. ಆದರೆ ಪಟ್ಟಣಪಂಚಾಯತ್ ಸದಸ್ಯನಾದ ಬಳಿಕ ಆಡಳಿತ ಪಕ್ಷ ಇದನ್ನು ಸಹಿಸದೆ ನನ್ನನ್ನು ದುರ್ಬಲಗೊಳಿಸಲು ಮುಂದಾಗುತ್ತಿದ್ದು ಸಾಲಿಗ್ರಾಮ ಪ.ಪಂ ಅಧ್ಯಕ್ಷೆ ಅನುದಾನ ಹಂಚಿಕೆಯಲ್ಲಿಯೂ ಇಬ್ಬಗೆ ನೀತಿ ತಳೆದಿದ್ದಾರೆ ಎಂದು ಸಾಲಿಗ್ರಾಮ ಪ.ಪಂ 13ನೇ ಪಾತಾಳಬೆಟ್ಟು ವಾರ್ಡ್ ಕಾಂಗ್ರೆಸ್ ಸದಸ್ಯ ರವೀಂದ್ರ ಕಾಮತ್ ಆರೋಪಿಸಿದ್ದಾರೆ.

ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಾಲಿಗ್ರಾಮ ಪ.ಪಂ. ಆಡಳಿತ ವಿಫಲತೆಯಿಂದ ಬೇಸರವಾಗಿದೆ. ಕಾಂಗ್ರೆಸ್ ಸದಸ್ಯರ ವಿರುದ್ಧ ದ್ವೇಷ ಧೋರಣೆ, ನಾಮ ನಿರ್ದೇಶಿತ ಸದಸ್ಯರ ಅಧಿಕಾರ ಮೀರಿದ ಹಸ್ತಕ್ಷೇಪಗಳು ಹೆಚ್ಚಾಗಿದೆ. ನಗರೋಥ್ಥಾನ ಅನುದಾನದಲ್ಲಿಯೂ ಪ್ರತಿಪಕ್ಷದ ಸದಸ್ಯರು ಸಹಿತ ನನಗೆ‌ ಅತೀ ಕನಿಷ್ಟ ಅನುದಾನ ನೀಡಿ ನನ್ನ ವಾರ್ಡಿನಲ್ಲಿ ನಡೆಯಬೇಕಾದ ಕಾಮಗಾರಿಗಳಿಗೆ ಹಿನ್ನಡೆ ಮಾಡಿದ್ದರಿಂದ ಜನರಿಗೆ ಸೇವೆ ನೀಡಬೇಕೆಂಬ ಅಭಿಲಾಷೆಗೆ ದಕ್ಕೆಯಾದ್ದರಿಂದ ರಾಜಿನಾಮೆ ನಿರ್ಧಾರಕ್ಕೆ ಬಂದಿದ್ದು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಹಿತೈಷಿಗಳ ಮನವೊಲಿಕೆಯಿಂದ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಅವರು ಸ್ಪಷ್ಟಪಡಿಸಿದರು.

ನನ್ನ ವಾರ್ಡಿನಲ್ಲಿ ರಸ್ತೆ ಕಾಮಗಾರಿಗಳಿಗೆ ಅಧ್ಯಕ್ಷರು ತಡೆಹಿಡಿಯುವ ಮೂಲಕ ಪಟ್ಟಣ ಪಂಚಾಯತ್ ಸದಸ್ಯನಾದ ನನ್ನ ಹಕ್ಕುಚ್ಯುತಿ ಮಾಡಿದಂತಾಗಿದೆ. ನನಗೆ ಸಂಬಂದಪಟ್ಟ ಯಾವುದೇ ಕಾಮಗಾರಿಗಳನ್ನು ಮಾಡಲು ಸಮಸ್ಯೆ ಮಾಡುತ್ತಿದ್ದಾರೆ. ಹೂಳೆತ್ತುವ ಕೆಲಸಕ್ಕೆ ಎಲ್ಲಾ ಕಡೆಗೆ ಜೆಸಿಬಿ ಕಳಿಸಿದ್ದು ನನ್ನ ವಾರ್ಡಿಗೆ ಕಳಿಸದ ಕಾರಣ ಹೂಳೆತ್ತಲಾಗಿಲ್ಲ ಎಂದು ಆರೋಪಿಸಿದ ಅವರು ವಾರ್ಡಿನಲ್ಲಿನ ಕಸ ವಿಲೇವಾರಿಗೂ ಅಡ್ಡಿ‌ಮಾಡಿದ್ದರಿಂದ ಸ್ಥಳೀಯ ಸಂಘಟನೆ ನೆರವಿನಿಂದ ಸ್ವಚ್ಚತಾ ಕಾರ್ಯ ಮಾಡಲಾಯಿತು. ಅಂಗನವಾಡಿಯೊಂದಕ್ಕೆ ಬಂದ 2 ಲಕ್ಷ ಅನುದಾನವನ್ನು ಬೇರೊಂದು ಅಂಗನವಾಡಿಗೆ ವರ್ಗಾಯಿಸುವ ಮೂಲಕ ಎಲ್ಲಾ ಅಭಿವೃದ್ಧಿ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಜಿ.ಪಂ, ಲೋಕಸಭೆ ಹಾಗೂ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಮತಗಳಿಸಿದ್ದು ಅಭಿವೃದ್ಧಿ ವಿಚಾರದಲ್ಲಿ ಜನರಿಗೆ ಯಾವ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಆಡಳಿತ ಪಕ್ಷವನ್ನು ಪ್ರಶ್ನಿಸಿದ ಅವರು ತಾಲೂಕು ಹಾಗೂ ಜಿಲ್ಲಾ ಕಚೇರಿಯಲ್ಲಿ ಕೆಲಸವಾಗುತ್ತದೆ ಆದರೆ ಪ.ಪಂ ನಲ್ಲಿ ಕೆಲಸ ಆಗುವುದಿಲ್ಲ. ಸಣ್ಣಸಣ್ಣ ವಿಚಾರದಲ್ಲಿಯೂ ಜನರಿಗೆ ಸೇವೆ ನೀಡಲು ವಿಳಂಭವಾಗುತ್ತಿದೆ. ಇದರಿಂದ ಜನರು ನನ್ನನ್ನು ಪ್ರಶ್ನೆ ಮಾಡುವಂತಾಗಿದೆ ಎಂದರು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮಾತನಾಡಿ, ಕಳೆದ ಪ.ಪಂ ಚುನಾವಣೆ ವೇಳೆ ಸಾಲಿಗ್ರಾಮ ಪಟ್ಟಣಪಂಚಾಯತ್ ನಲ್ಲಿ‌ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಾದರಿಯಾಗಿ ಮಾಡುವ ಪ್ರಣಾಳಿಕೆ ಸಿದ್ದಪಡಿಸಲಾಗಿತ್ತು. ಆದರೆ ಪ್ರತಿಪಕ್ಷ ಸ್ಥಾನಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸದಸ್ಯರ ಮೇಲೆ ಅಧ್ಯಕ್ಷರು ಕಿರುಕುಳ ನೀಡುತ್ತಿದ್ದಾರೆ. ಜನಪ್ರತಿನಿಧಿಗಳ ಹಕ್ಕು ಕಸಿಯುವ ಕಾರ್ಯವಾಗುತ್ತಿದ್ದು ಇದು ಮುಂದುವರೆದಲ್ಲಿ ಜನರನ್ನು ಒಗ್ಗೂಡಿಸಿಕೊಂಡು ಪ.ಪಂ ಕಚೇರಿಯೆದುರು ಹೋರಾಟ ಮಾಡುತ್ತೇವೆ ಎಂದರು.

ಸಾಲಿಗ್ರಾಮ ಪ.ಪಂ ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಮಾತನಾಡಿ, ಕಳೆದ 13 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದ್ದು ಸಾಲಿಗ್ರಾಮದ ಅಭಿವೃದ್ಧಿಗೆ ನೀಡಿದ ಕೊಡುಗೆ ಶೂನ್ಯ. ಘನ ತ್ಯಾಜ್ಯ ವಿಲೇವಾರಿಯಲ್ಲಿ ಕಳಪೆ ಸಾಧನೆ ತೋರಿದೆ. ಸಾಲಿಗ್ರಾಮದ ಒಳ ಪೇಟೆಯ ಅಭಿವೃದ್ಧಿಗೆ 23 ಲಕ್ಷದ ಇಂಟರ್ಲಾಕ್ ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸದಿರುವುದು ದುರಂತ. ಇದೆಲ್ಲದರ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದರೂ ಕೂಡ ಕಿಂಚಿತ್ ಸ್ಪಂದನೆಯಿಲ್ಲ. ಪ್ರಚಾರ ಹಾಗೂ ಸಭೆ-ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ ಅಧ್ಯಕ್ಷರ ಸಾಧನೆ ಎಂದು ಶ್ರೀನಿವಾಸ್ ಅಮೀನ್ ಟೀಕಿಸಿದರು.

ಸಾಲಿಗ್ರಾಮ ಪ.ಪಂ ಸದಸ್ಯ ಪುನೀತ್ ಪೂಜಾರಿ, ಕೋಟ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಗಣೇಶ್ ಕೆ. ನೆಲ್ಲಿಬೆಟ್ಟು, ದಿನೇಶ್ ಬಂಗೇರ ಪತ್ರಿಕಾಗೋಷ್ಠಿಯಲ್ಲಿದ್ದರು.

Comments are closed.