ಕರಾವಳಿ

‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿಗೆ ಭಾಜನರಾದ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು

Pinterest LinkedIn Tumblr

ಕುಂದಾಪುರ: ಕನ್ನಡದಲ್ಲಿ ವಾದ, ಪ್ರತಿವಾದ ಹಾಗೂ ತೀರ್ಪುಗಳ ಮೇಲೆ ಅಭಿಪ್ರಾಯ ಮಂಡಿಸಿದ ಸರಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ರಿಗೆ ನೀಡಲಾಗುವ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿಗೆ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಭಾಜನರಾಗಿದ್ದಾರೆ.

2019-20ನೇ ಹಾಗೂ 2020-21ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜ.22 ರವಿವಾರದಂದು ಸಂಜೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಜರುಗಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಿ. ನರೇಂದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ನ್ಯಾಯಾಧೀಶರು, ಸರಕಾರಿ ಅಭಿಯೋಜಕರು ಹಾಗೂ ವಕೀಲರಿಗೆ ನೀಡುವ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಕೋವಿಡ್ ಕಾರಣಕ್ಕಾಗಿ 2 ವರ್ಷದಿಂದ ನಡೆದಿರಲಿಲ್ಲ. ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ಅವರು 2019-20ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾದವರಾಗಿದ್ದು ಆ ವೇಳೆ ಅವರು ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾಗಿದ್ದರು.

ನ್ಯಾಯಾಂಗದಲ್ಲಿ ಕನ್ನಡ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತ್ರಾಸು ಹಿಡಿದು ನಿಂತ ನ್ಯಾಯದೇವತೆಗೆ ನ್ಯಾಯ ನುಡಿಯಲು ಮೇಲು-ಕೀಳುಗಳ ಹಂಗಿಲ್ಲ. ಅಪರಾಧಿಗೆ ಶಿಕ್ಷೆ, ನೊಂದವರಿಗೆ ನ್ಯಾಯ-ಅಲ್ಲ ಎರಡೇ ಆಯ್ಕೆಗಳು, ನ್ಯಾಯಾಂಗದ ಮುಖ್ಯ ಅಭಿವ್ಯಕ್ತಿಯ ಅಂತಃಸಾಕ್ಷಿಯಾದ ನ್ಯಾಯಾಧೀಶರು ಜನರ ಭಾಷೆಯಲ್ಲಿಯೇ ತೀರ್ಪಿನ ಸಾಂತ್ವನ ನೀಡಲಿ ಹಾಗೂ ತಮ್ಮನ್ನು ಪ್ರತಿನಿಧಿಸುವ ವಕೀಲರು ಜನರ ಭಾಷೆಯಲ್ಲಿಯೇ ವಾದ ಮಂಡಿಸಲಿ ಎನ್ನುವುದು ನೊಂದವರ ಹಾಗೂ ನ್ಯಾಯಾಪೇಕ್ಷಿಗಳ ಆಸೆಯಷ್ಟೇ ಅಲ್ಲ, ಆಡಳಿತದ ಚುಕ್ಕಾಣಿ ಹಿಡಿದ ಸರ್ಕಾರದ ಪ್ರಮುಖ ಆಪೇಕ್ಷೆಯೂ ಹೌದು.

ನೆಲದ ಭಾಷೆಯಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು ಹಾಗೂ ವಾದ ಮಂಡಿಸಿದ ಅಭಿಯೋಜಕರು ಮತ್ತು ವಕೀಲರುಗಳು ತಮ್ಮ ಭಾಷಾ ಬದ್ಧತೆಯ ಮೂಲಕ ಸಮಾಜಕ್ಕೆ ರವಾನಿಸುವ ಗಟ್ಟಿ ಸಂದೇಶವನ್ನು ಸರ್ವವ್ಯಾಪಿ ಮಾಡುವ, ಕನ್ನಡತನವನ್ನು ನ್ಯಾಯಾಲಯಗಳ ಆವರಣದಲ್ಲಿಯೂ ಹರಡುವ ಮೂಲಕ ಜನಸ್ನೇಹಿಯಾದ ವಾತಾವರಣವನ್ನು ನಿರ್ಮಿಸುವ ಸರ್ಕಾರದ ಕನ್ನಡಪರ ಆಶಯಕ್ಕೆ ಪೂರಕವಾದ ಸಮರ್ಥ ಬದ್ಧತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಿಂದಿನಿಂದಲೂ ಮನಗಾಣಿಸುತ್ತಾ ಬಂದಿದೆ. ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ 477ನ್ಯಾಯಾಧೀಶರು, 29 ಸರ್ಕಾರಿ ಅಭಿಯೋಜಕರು ಹಾಗೂ 20 ವಕೀಲರುಗಳು ಸೇರಿ 527 ಪುರಸ್ಕೃತರುಗಳಿಗೆ ಕಳೆದ ಹತ್ತು ವರ್ಷಗಳಲ್ಲಿ ಪ್ರಾಧಿಕಾರ ಗೌರವವನ್ನು ಸಮರ್ಪಿಸಿದೆ. ಪ್ರಸ್ತುತ 2019-20 ಹಾಗೂ 2020-21ನೇ ಸಾಲಿನಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ ಒಟ್ಟು 90 ನ್ಯಾಯಾಧೀಶರು ಹಾಗೂ ಕನ್ನಡದಲ್ಲಿ ವಾದ ಮಂಡಿಸಿದ 12 ಸರ್ಕಾರಿ ಅಭಿಯೋಜಕರು ಹಾಗೂ 18 ವಕೀಲರುಗಳು ಸೇರಿದಂತೆ ಒಟ್ಟು 120 ಪುರಸ್ಕೃತರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸುವ ಮೂಲಕ ಭಾಷಾ ಬದ್ಧತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುತ್ತಿದೆ.

Comments are closed.