(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬದಿಯಡ್ಕದ ವೈದ್ಯರಾದ ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರ ನಿಗೂಢ ಸಾವಿನ ಕುರಿತು ಉಡುಪಿ ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಅಕ್ಷಯ್ ಎಂ.ಎಚ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಬಗ್ಗೆ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ನೇತೃತ್ವದಲ್ಲಿ ಮೂವರು ಪಿಎಸ್ಐ ಹಾಗೂ ನುರಿತ ತಾಂತ್ರಿಕ ಸಿಬ್ಬಂದಿಗಳ ತಂಡ ರಚಿಸಿ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ. ಘಟನೆ ನಡೆದ ರೈಲ್ವೆ ಟ್ರ್ಯಾಕ್ ಪರಿಶೀಲನೆ ವೇಳೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಸಿಪಿಐ ಗೋಪಿಕೃಷ್ಣ, ತನಿಖಾ ತಂಡದ ಪಿಎಸ್ಐಗಳಾದ ಪವನ್, ಶ್ರೀಧರ್ ನಾಯ್ಕ್, ಪ್ರಸಾದ್ ಹಾಗೂ ಸಿಬ್ಬಂದಿಗಳಿದ್ದರು. ಶ್ವಾನದಳವೂ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ.
ಕುಂದಾಪುರ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ, ಈಗಾಗಾಲೇ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಲಾಗಿದೆ. ಕುಂದಾಪುರ ಡಿವೈಎಸ್ಪಿ ಸಂಪೂರ್ಣ ತನಿಖೆಯ ಉಸ್ತುವಾರಿ ವಹಿಸಲಿದ್ದು ತನಿಖಾ ತಂಡ ಈಗಾಗಾಲೇ ಕಾಸರಗೋಡಿಗೆ ತೆರಳಿ ಮಾಹಿತಿ ಕಲೆಹಾಕಿದೆ. ರೈಲ್ವೆಗೆ ಸಂಬಂದಪಟ್ಟಂತೆ ಹಾಗೂ ಸಿಸಿ ಟಿವಿ ದೃಶ್ಯಾವಳಿ ಕಲೆಹಾಕಲಾಗುತ್ತಿದೆ. ಫೋರೆನ್ಸಿಕ್ ತಜ್ಞರ ಬಳಿಯೂ ಅಗತ್ಯ ಮಾಹಿತಿ ಕಲೆಹಾಕಲಾಗಿದೆ. ಕಾಸರಗೋಡು ಪೊಲೀಸರ ಜೊತೆಯೂ ಸಂಪರ್ಕದಲ್ಲಿದ್ದೇವೆ ಎಂದರು.
ನ.9 ರಂದು ತಲ್ಲೂರು ರಾಜಾಡಿ ಎಂಬಲ್ಲಿ ರೈಲ್ವೇ ಟ್ರ್ಯಾಕ್ ಮೇಲೆ ಮೃತದೇಹವಿರುವ ಬಗ್ಗೆ ಮಾಹಿತಿ ಬಂದು ಪರಿಶೀಲನೆ ನಡೆಸಿದಾಗ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿ ಮನೆ ಎಂಬಲ್ಲಿ ರೈಲ್ವೇ ಟ್ರ್ಯಾಕ್ ಬಳಿ ಛಿದ್ರವಾದ ಸ್ಥಿತಿಯಲ್ಲಿ ಡಾ.ಕೃಷ್ಣಮೂರ್ತಿ ಅವರ ಮೃತದೇಹ ಕಂಡು ಬಂದಿತ್ತು. ಕುಂದಾಪುರ ರೈಲು ನಿಲ್ದಾಣದಿಂದ 5 ಕಿ.ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿರುವುದು ಕೂಡ ನಿಗೂಢವಾಗಿದ್ದು ಕುಟುಂಬಿಕರು ಹಾಗೂ ಸ್ನೇಹಿತರು ಸಂಶಯ ವ್ಯಕ್ತಪಡಿಸಿದ್ದರು. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಹಜ ಮರಣ ಪ್ರಕರಣ ದಾಖಲಾಗಿತ್ತು.
Comments are closed.