ಕರಾವಳಿ

ಅಕ್ರಮ ಮರಳುಗಾರಿಕೆ ದಕ್ಕೆಗೆ ಗಣಿ ಇಲಾಖಾಧಿಕಾರಿಗಳ ದಾಳಿ; 3 ಟಿಪ್ಪರ್ ಲಾರಿಗಳು ವಶ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿ ಬುಧವಾರ ಮುಂಜಾನೆ ಎರಡು ಕಡೆಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ದಾಳಿ ನಡೆಸಿ 3 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲೆಯ ಕುಂದಾಪುರ ತಾಲೂಕು ತ್ರಾಸಿ, ಮೊವಾಡಿ ಗ್ರಾಮ ಹಾಗೂ ಬೈಂದೂರು ತಾಲೂಕಿನ ಮರವಂತೆ ಹಾಗೂ ಬಡಾಕೆರೆ ಗ್ರಾಮ ವ್ಯಾಪ್ತಿಯಲ್ಲಿ ಸೌಪರ್ಣಿಕಾ ನದಿಯಿಂದ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ ಸಾಗಾಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸ್ವೀಕೃತವಾದ ದೂರಿನ ಮೇರೆಗೆ ಇಲಾಖೆ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ. ಯು ಅವರು ಮಾರ್ಗದರ್ಶನದಲ್ಲಿ ಸೆ.21 ರಂದು ಮುಂಜಾನೆ 4.20 ರ ವೇಳೆ ಭೂ ವಿಜ್ಞಾನಿ ಸಂಧ್ಯಾ ಅವರು ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಆನಗೋಡು ಎಂಬಲ್ಲಿ ದಾಳಿ ನಡೆಸಿ ಮರಳು ತುಂಬಲು ದಕ್ಕೆಯಲ್ಲಿ ನಿಂತಿದ್ದ ಒಂದು ಲಾರಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಇನ್ನೊಂದು ಪ್ರಕರಣದಲ್ಲಿ ಸಮಯ ಮುಂಜಾನೆ 4.45 ಕ್ಕೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮ ವ್ಯಾಪ್ತಿಯ ಅರಮ ದೇವಸ್ಥಾನದ ಹತ್ತಿರದ ಅನಧಿಕೃತ ಮರಳು ಗಣಿಗಾರಿಕೆ ದಕ್ಕೆಗೆ ದಾಳಿ ನಡೆಸಿ ಮರಳು ತುಂಬಲು ದಕ್ಕೆಯಲ್ಲಿ ನಿಂತಿದ್ದ 2 ಟಿಪ್ಪರ್ ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ತ್ರಾಸಿ ವ್ಯಾಪ್ತಿಯ ಅನಧಿಕೃತ ಮರಳು ದಕ್ಕೆಗಳಿಗೆ ದಾಳಿಯಾಗುತ್ತಿದ್ದಂತೆ, ಕುಂದಾಪುರ ವ್ಯಾಪ್ತಿಯ ಹಕ್ಲಾಡಿ, ಕಾವ್ರಾಡಿ , ಹಳ್ನಾಡು, ಅಂಪಾರು ಹಾಗೂ ಬೈಂದೂರು ತಾಲೂಕು ಬಡಾಕೆರೆ ವ್ಯಾಪ್ತಿಯಲ್ಲಿ ಅನಧಿಕೃತ ಮರಳುಗಾರಿಕೆಯನ್ನು ನಡೆಸುತ್ತಿದ್ದವರು ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ಸ್ಥಗಿತಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಅನಧಿಕೃತ ಮರಳು ಗಣಿಗಾರಿಕೆಗೆ ದಕ್ಕೆ ಹಾಗೂ ಸಾಗಾಣಿಕೆಗೆ ರಸ್ತೆಯನ್ನು ಕೆಲವು ಖಾಸಗಿ (ಪಟ್ಟಾ) ಜಾಗಗಳಲ್ಲಿ ನೀಡಿರುವುದು ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದಿದ್ದು, ಅಂತಹ ಜಾಗದ ಪಟ್ಟಾದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭೂವಿಜ್ಞಾನಿಯವರು ತಿಳಿಸಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ವಹಿಸುವವರೆಗೆ ಅನಧಿಕೃತ ಮರಳು ಸಾಗಾಣಿಕೆಗೆ ಬಳಸುತ್ತಿದ್ದ ಲಾರಿಗಳನ್ನು ಗಂಗೊಳ್ಳಿ ಪೊಲೀಸ್ ಠಾಣೆ ಸುಪರ್ದಿಯಲ್ಲಿ ಇರಿಸಲಾಗಿದೆ‌.

 

 

Comments are closed.