ಕರಾವಳಿ

ನೀಟ್ ಪರೀಕ್ಷೆಯಲ್ಲಿ ಕಮ್ಮಿ ಅಂಕ ಬಂದಿದ್ದಕ್ಕೆ ನದಿಗೆ ಹಾರಿದ ವಿದ್ಯಾರ್ಥಿ ಆತ್ಮಹತ್ಯೆ: ನಾವುಂದದಲ್ಲಿ ಮೃತದೇಹ ಪತ್ತೆ

Pinterest LinkedIn Tumblr

ಕುಂದಾಪುರ: ನೀಟ್ ಪರೀಕ್ಷೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದ ವಿದ್ಯಾರ್ಥಿಯೋರ್ವ  ಸೇತುವೆ ಮೇಲಿನಿಂದ ಪಂಚಗಂಗಾವಳಿ ನದಿಗೆ ಹಾರಿದ ಘಟನೆ ಕುಂದಾಪುರ ಸಂಗಮ್ ಸೇತುವೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದ್ದು ನಿರಂತರ ಶೋಧ ಕಾರ್ಯದ ಬಳಿಕ ವಿದ್ಯಾರ್ಥಿ ಮೃತದೇಹ ಬೈಂದೂರು ತಾಲೂಕಿನ ನಾವುಂದ ಸಮುದ್ರ ತೀರದಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.

ಕುಂದಾಪುರದ ವಡೇರಹೋಬಳಿ ಜೆಎಲ್‌ಬಿ ರಸ್ತೆಯ ನಿವಾಸಿ ರಘುವೀರ್ ಶೆಟ್ಟಿ ಎನ್ನುವವರ ಪುತ್ರ ಸಾಯೀಶ್ ಶೆಟ್ಟಿ (18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಗುರುವಾರ ಮಧ್ಯಾಹ್ನ ಸುಮಾರು 11.30ರ ವೇಳೆಗೆ ಸಾಯೀಶ್ ಶೆಟ್ಟಿ ಸೈಕಲ್‌ನಲ್ಲಿ ಸಂಗಮ್ ಸೇತುವೆಯ ಮೇಲೆ ಬಂದು, ಬಳಿಕ ಸೈಕಲ್ ಹಾಗೂ ಮೊಬೈಲ್ ಅನ್ನು ಸೇತುವೆ ಮೇಲೆ ಇಟ್ಟು ನದಿಗೆ ಹಾರಿದ್ದಾರೆ.

ಶಿವಮೊಗ್ಗದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸದ ಮುಗಿಸಿದ್ದ ಸಾಯೀಶ್ ಶೆಟ್ಟಿ ಕಲಿಕೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದು ಈ ಬಾರಿಯ ನೀಟ್ ಪರೀಕ್ಷೆ ಬರೆದಿದ್ದರು. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಅವರು ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಬೆಳಿಗ್ಗೆ ಸೈಬರ್‌ ಕೇಂದ್ರಕ್ಕೆ ತೆರಳಿ ಫಲಿತಾಂಶ ನೋಡಿದ್ದಾರೆ ಎನ್ನಲಾಗುತ್ತಿದೆ. ಪರೀಕ್ಷೆಯಲ್ಲಿ ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎನ್ನುವ ಕಾರಣಕ್ಕಾಗಿ ಬೇಸರಗೊಂಡು ಆತ್ಮಹತ್ಯೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.

ಘಟನೆ ಬಳಿಕ ಪೊಲೀಸರು, ಅಗ್ನಿಶಾಮಕದಳ, ಸ್ಥಳೀಯ ಮೀನುಗಾರರು, ಮುಳುಗು ತಜ್ಞರು ಸಾಯೀಶ್ ಮೃತದೇಹಕ್ಕಾಗಿ ಶೋಧ ನಡೆಸಿದ್ದರೂ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಮೃತದೇಹ ಪತ್ತೆಯಾಗಿರಲಿಲ್ಲ.

Comments are closed.