ಕರಾವಳಿ

ರಸ್ತೆ ಅಪಘಾತದಲ್ಲಿ ಹೆಮ್ಮಾಡಿ ಸರ್ಕಾರಿ ಶಾಲೆ ಶಿಕ್ಷಕಿ ಬಲಿ; ಭಾವುಕರಾಗಿ ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಅಂತಿಮ ನಮನ

Pinterest LinkedIn Tumblr

ಕುಂದಾಪುರ:  ರಸ್ತೆಯಲ್ಲಿ ದನ ಅಡ್ಡಬಂದು ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಹಿಂಬದಿ ಸೀಟಿನಲ್ಲಿ ಕುಳಿತು ಶಾಲೆಗೆ ತೆರಳುತ್ತಿದ್ದ ಶಿಕ್ಷಕಿ ಗಾಯಗೊಂಡಿದ್ದು ಗುರುವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮುದೂರು ಸೆಳ್ಕೋಡು ನಿವಾಸಿ, ಹೆಮ್ಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಅಂಬಿಕಾ (32) ಮೃತರು.

ಘಟನೆ ವಿವರ:
ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಪತಿ ಶ್ರೀಕಾಂತ್ ಅವರೊಂದಿಗೆ ಗುರುವಾರ ಬೆಳಿಗ್ಗೆ ಮುದೂರಿನಿಂದ ಬೈಕಿನಲ್ಲಿ ಮನೆಯಿಂದ ಹೊರಟಿದ್ದರು. ವಂಡ್ಸೆ ಸಮೀಪ ಏಕಾಏಕಿ ರಸ್ತೆಯಲ್ಲಿ ದನ ಅಡ್ಡಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದಿದ್ದಾರೆ. ಶ್ರೀಕಾಂತ್ ಅವರಿಗೆ ಸಣ್ಣಪಟ್ಟು ಗಾಯಗಳಾಗಿದ್ದು ಹಿಂಬದಿಯಲ್ಲಿ ಕುಳಿತಿದ್ದ ಅಂಬಿಕಾ ಅವರಿಗೆ ತಲೆ ಭಾಗಕ್ಕೆ ಗಂಭೀರ ಪೆಟ್ಟಾಗಿತ್ತು. ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ರಾತ್ರಿ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ ಒಂದೂವರೆ ವರ್ಷ ಮಗುವಿದೆ.

ಕಣ್ಣೀರಿಟ್ಟ ವಿದ್ಯಾರ್ಥಿಗಳು: 2018ರಲ್ಲಿ ಹೆಮ್ಮಾಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಅಂಬಿಕಾ ಟೀಚರ್ ವಿದ್ಯಾರ್ಥಿಗಳಿಗೆ ನೆಚ್ಚಿನವನಾಗಿದ್ದರು‌. ಅವರು ಮೃತ ಪಟ್ಟಿರುವ ಸುದ್ದಿ ತಿಳಿದ ಬಳಿಕ ಶಾಲಾ ವಿದ್ಯಾರ್ಥಿಗಳು ಅಶ್ರು ಕಣ್ಣೀರು ಹಾಕಿದರು. ಶುಕ್ರವಾರ ಬೆಳಿಗ್ಗೆಯಿಂದಲೇ ಮೃತ ಶಿಕ್ಷಕಿಯ ಪಾರ್ಥಿವ ಶರೀರ ಶಾಲಾವರಣಕ್ಕೆ ಬರುವಿಕೆಗೆ ಕಾಯುತ್ತಿದ್ದ ವಿದ್ಯಾರ್ಥಿಗಳು, ಪೋಷಕರು, ಸಹೋದ್ಯೋಗಿಗಳು, ಶಿಕ್ಷಕರ ಸಂಘಟನೆಯವರ ಸಹಿತ ಸ್ಥಳೀಯರು ಮಧ್ಯಾಹ್ನದ ವೇಳೆ ಶಾಲೆಯ ಆವರಣಕ್ಕೆ  ಮರಣೋತ್ತರ ಪರೀಕ್ಷೆ ಬಳಿಕ ತರಲಾದ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ ಭಾವುಕರಾದರು. ಈ ವೇಳೆ ವಿದ್ಯಾರ್ಥಿಗಳು ಪಾರ್ಥಿವ ಶರೀರದ ಮೇಲೆ ಹೂಗಳ ಬೊಕ್ಕೆಗಳನ್ನು ಇಟ್ಟು ಅಂತಿಮ ನಮನ ಸಲ್ಲಿಸಿದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್, ಜಿ.ಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧಾಕರ ದೇವಾಡಿಗ, ಸದಸ್ಯರಾದ ಯು.ಸತ್ಯನಾರಾಯಣ ರಾವ್, ರಾಘವೇಂದ್ರ ಪೂಜಾರಿ ಹೆಚ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ, ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ, ಮುಖ್ಯ ಶಿಕ್ಷಕ ದಿವಾಕರ, ಎಪಿಎಂಸಿ ಮಾಜಿ ಅಧ್ಯಕ್ಷ ಶರತಕುಮಾರ್ ಶೆಟ್ಟಿ ಬಾಳಿಕೆರೆ, ಕಟ್‌ಬೇಲ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್ ಪುತ್ರನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ಜಿ. ಪುತ್ರನ್ ಇದ್ದರು.

Comments are closed.