ಕರಾವಳಿ

ಅರ್ಜುನ್ ಕಾಪಿಕಾಡ್ ನಿರ್ದೇಶನದ ಪ್ರಥಮ ತುಳು ಚಿತ್ರ ‘ಅಬತರ’ ಆ.18ಕ್ಕೆ ಬಿಡುಗಡೆ

Pinterest LinkedIn Tumblr

ಮಂಗಳೂರು : ಬೊಳ್ಳಿ ಮೂವೀಸ್ ಮತ್ತು ಅವಿಕ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತಯಾರಾದ ಪ್ರಥಮ ಬಾರಿಗೆ ನಟ ಅರ್ಜುನ್ ಕಾಪಿಕಾಡ್ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನೆಮಾ ‘ಅಬತರ’ ಆ.18ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ, ತುಳುನಾಡ ಆಯಕ್ಷನ್ ಕಿಂಗ್, ನಟ ಅರ್ಜುನ್ ಕಾಪಿಕಾಡ್ ಅವರು, ಈ ಸಿನೆಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್, ಸಿನಿಪಾಲಿಸ್, ಪಿವಿಆರ್, ಮೂಡುಬಿದಿರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಐನಾಕ್ಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದರು.

ಆ.16 ಮತ್ತು 17ರಂದು ಮಂಗಳೂರು, ಮೂಡುಬಿದಿರೆ, ಪುತ್ತೂರು, ಉಡುಪಿ, ಪಡುಬಿದ್ರೆ, ಕಿನ್ನಿಗೋಳಿ, ಗುರುಪುರ, ಕುಲಶೇಖರ ಮೊದಲಾದ ಅನಾಥಶ್ರಮದಲ್ಲಿರುವ ಮಕ್ಕಳಿಗೆ ಸಿನೆಮಾವನ್ನು ಉಚಿತವಾಗಿ ಪ್ರದರ್ಶಿಸಲಾಗುವುದು ಎಂದವರು ಮಾಹಿತಿ ನೀಡಿದರು.

ಅಬತರ ಹಾಸ್ಯ ಸಿನಿಮಾದ ಕತೆಯನ್ನು ಡಾ| ದೇವದಾಸ್ ಕಾಪಿಕಾಡ್ ರಚಿಸಿ, ಅಭಿನಯಿಸಿದ್ದಾರೆ. ನಟ ‘ಅರ್ಜುನ್ ಕಾಪಿಕಾಡ್’ ಅಭಿನಯದ ಜೊತೆಗೆ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಪ್ರೇಕ್ಷಕರು ಇಷ್ಟ ಪಡುವಂತೆ ಇದು ಸಂರ್ಪೂ ಹಾಸ್ಯ ಪ್ರಧಾನ ಸಿನೆಮಾ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನೂ ನೀಡಲಾಗಿದೆ ಎಂದು ಅರ್ಜುನ್ ಕಾಪಿಕಾಡ್ ತಿಳಿಸಿದರು.

ತಾರಾಗಣದಲ್ಲಿ ಕರಾವಳಿಯ ಪ್ರಸಿದ್ಧ ನಟರಾದ ನವೀನ್ ಡಿ ಪಡಿಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿ ಕೃಷ್ಣ, ಸನಿಲ್ ಗುರು, ಚೇತನ್ ರೈ ಮಾಣಿ ,ಲಕ್ಷ್ಮೀಶ್, ಸುನೀಲ್ ಚಿತ್ರಾಪುರ ಮತ್ತು ನಾಯಕನಟಿಯಾಗಿ ಗಾನ ಭಟ್, ಕ್ರಿಸ್ಟಿನಾ ನಟಿಸಿದ್ದಾರೆ. ಛಾಯಾಗ್ರಾಹಕರಾಗಿ ವಿಷ್ಣು ಪ್ರಸಾದ್, ಜೇಕಬ್, ಕಾರ್ಯಕಾರಿ ನಿರ್ಮಾಪಕರಾಗಿ ಸಂದೀಪ್ ಶೆಟ್ಟಿ ಕೆಲಸ ಮಾಡಿದ್ದಾರೆ. ನಿಖಿಲ್ ಸಾಲ್ಯಾನ್ ನಿರ್ಮಾಪಕರಾಗಿದ್ದು, ವೀರಾಜ್ ಅತ್ತಾವರ ಸಹ ನಿರ್ಮಾಪಕರಾಗಿದ್ದಾರೆ

ಮುಂದಿನ ದಿನಗಳಲ್ಲಿ ಮುಂಬೈ, ಬೆಂಗಳೂರು ಸೇರಿದಂತೆ ಕಾಸರಗೋಡು, ಮುಳ್ಳೇರಿಯ, ಸಕಲೇಶಪುರ, ಶುಂಠಿಕೊಪ್ಪ, ತೀರ್ಥಹಳ್ಳಿ, ಕುಂದಾಪುರ, ಶಿವಮೊಗ್ಗ ಮೊದಲಾದ ಕಡೆಗಳಲ್ಲಿ ಸಿನೆಮಾ ಬಿಡುಗಡೆ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅರ್ಜುನ್ ಕಾಪಿಕಾಡ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕಿ ಶ್ರೀಮತಿ ಶರ್ಮಿಳಾ ಕಾಪಿಕಾಡ್, ‘ಅಬತರ’ ಚಿತ್ರದ ನಿರ್ಮಾಪಕ ನಿಖಿಲ್ ಸಾಲ್ಯಾನ್, ಖ್ಯಾತ ನಟರಾದ ನವೀನ್ ಡಿ ಪಡಿಲ್, ಸಾಯಿ ಕೃಷ್ಣ, ಸನಿಲ್ ಗುರು, ನಾಯಕನಟಿಯರಾದ ಗಾನ ಭಟ್, ಕ್ರಿಸ್ಟಿನಾ, ಪ್ರಮುಖರಾದ ಬಾಳಾ ಜಗನ್ನಾಥ ಶೆಟ್ಟಿ, ಅನೂಪ್ ಸಾಗರ್ ಮುಂತಾದವರು ಉಪಸ್ಥಿತರಿದ್ದರು. ಲಕ್ಷ್ಮೀಶ್ ಕಾರ್ಯಕ್ರಮ ನಿರೂಪಿಸಿದರು.

Comments are closed.