(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕರಾವಳಿ ಭಾಗದಲ್ಲಿ ನಡೆದ ಹಿಂದೂ, ಮುಸ್ಲಿಂ ಯುವಕರ ಹತ್ಯೆಯ ಬಳಿಕ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಉಡುಪಿ ಜಿಲ್ಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆ, ಗಸ್ತು ಹೆಚ್ಚಿಸಲಾಗಿದೆ.
ಶನಿವಾರ ಸಂಜೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನಿರ್ದೇಶನದಲ್ಲಿ ಕುಂದಾಪುರ ವೃತ್ತನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಕುಂದಾಪುರ ನಗರ, ಗ್ರಾಮಾಂತರ ಠಾಣೆ, ಸಂಚಾರಿ ಠಾಣೆ, ಶಂಕರನಾರಾಯಣ ಹಾಗೂ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಹಾಗೂ ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಗಂಗೊಳ್ಳಿ ಠಾಣೆ, ಬೈಂದೂರು ಹಾಗು ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದರು.
ಪೊಲೀಸ್ ಚೆಕ್ ಪೋಸ್ಟ್ ನಿರ್ಮಿಸಿ ಒಳ ಪ್ರವೇಶಿಸುವ ಎಲ್ಲಾ ವಾಹನಗಳನ್ನು ತಪಾಸಣೆಗೊಳಪಡಿಸಿ ಕಾರಿನ ಹಿಂಭಾಗದ ಡಿಕ್ಕಿಯನ್ನೂ ಪೊಲೀಸರು ಪರಿಶೀಲಿಸಿ ವಾಹನ ನೋಂದಣಿ ಸಂಖ್ಯೆಯನ್ನು ಕೂಡ ಬರೆದುಕೊಂಡು ಅಗತಗಯ ಬಿದ್ದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದರು. ಮಾತ್ರವಲ್ಲದೆ ದಾಖಲೆಗಳು ಸರಿಯಿಲ್ಲದ ವಾಹನಗಳಿಗೆ ದಂಡ ಕೂಡ ವಿಧಿಸಲಾಗಿದೆ.
ಬೆಳ್ಳಾರೆ ಹಾಗು ಸುರತ್ಕಲ್ ದುರ್ಘಟನೆ ಬಳಿಕ ಇನ್ನಷ್ಟು ಅನಾಹುತ ತಡೆಯಲು ಜಿಲ್ಲಾದ್ಯಂತ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಕುಂದಾಪುರ ಠಾಣಾ ವ್ಯಾಪ್ತಿ 5 ಕಡೆ….
ಕುಂದಾಪುರ ಠಾಣಾ ವ್ಯಾಪ್ತಿಯ ಕೋಡಿ, ಕುಂದಾಪುರ ಶಾಸ್ತ್ರಿ ವೃತ್ತ, ಕುಂಭಾಸಿ, ಬಸ್ರೂರು ಮೂರುಕೈ, ಸಂಗಮ್ ಜಂಕ್ಷನ್ ಬಳಿ ಚೆಕ್ ಪೋಸ್ಟ್ ಮಾಡಿ ಈ ತಪಾಸಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕುಂದಾಪುರ ಪಿಎಸ್ಐ ಸದಾಶಿವ ಗವರೋಜಿ, ಕ್ರೈಮ್ ವಿಭಾಗದ ಪ್ರಸಾದ್, ಕುಂದಾಪುರ ಟ್ರಾಫಿಕ್ ಠಾಣಾ ಪಿಎಸ್ಐಗಳಾದ ಮಹೇಶ್ ಕಂಬಿ, ಸುಧಾ ಪ್ರಭು, ಎಎಸ್ಐ, ಸಿಬ್ಬಂದಿಗಳು ವಾಹನ ತಪಾಸಣಾ ಕಾರ್ಯಾಚರಣೆಯಲ್ಲಿದ್ದರು.
Comments are closed.