ಕರ್ನಾಟಕ

ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣ: ಚಿಕ್ಕಮಗಳೂರು ಎಸ್ಪಿ ಮುಂದೆ ಶರಣಾಗಿ ತಪ್ಪೊಪ್ಪಿಕೊಂಡ ಆರೋಪಿಗಳು

Pinterest LinkedIn Tumblr

ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ನಡೆದ ಕುಖ್ಯಾತ ರೌಡಿಶೀಟರ್ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಬರ್ಬರ ಹತ್ಯೆ ಪ್ರಕರಣ ಸಂಬಂಧ ಕೊಲೆ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ.

ತಡರಾತ್ರಿ ಎಸ್​ಪಿ ಅಕ್ಷಯ್ ಕಚೇರಿಗೆ ಆಗಮಿಸಿದ ಎಂಟು ಮಂದಿ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಅರೋಪಿಗಳು ಚಿಕ್ಕಮಗಳೂರು ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಗೃಹ ಸಚಿವರ ಜಿಲ್ಲೆಯಾದ ಶಿವಮೊಗ್ಗದಲ್ಲಿ ಹಂದಿ ಅಣ್ಣಿಯ ಬರ್ಬರ ಹತ್ಯೆ ಬೆಚ್ಚಿಬೀಳಿಸಿತ್ತು. ಬೈಕ್​ನಲ್ಲಿ ಹೋಗುತ್ತಿದ್ದ ಹಂದಿ ಅಣ್ಣಿಯನ್ನು ಅಡ್ಡಗಟ್ಟಿದಾಗ ತನ್ನ ಮೇಲೆ ದಾಳಿ ನಡೆಸುವ ಬಗ್ಗೆ ತಿಳಿದು ಪೊಲೀಸ್ ಚೌಕಿ ಕಡೆ ಓಡಲು ಆರಂಭಿಸುತ್ತಾನೆ. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಹಂದಿ ಅಣ್ಣಿಯ ಬೆನ್ನಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಹಂದಿ ಅಣ್ಣಿ ನೆಲಕ್ಕೆ ಬಿದ್ದಿದ್ದು ದುಷ್ಕರ್ಮಿಗಳು ಮನಬಂದಂತೆ ತಲೆಯನ್ನು ಲಾಂಗು, ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ತಲೆಗೆ ಗಂಭಿರವಾಗಿ ಗಾಯಗೊಂಡಿದ್ದ ಹಂದಿ ಅಣ್ಣಿ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಈ ಘಟನೆ ನಡೆದಿತ್ತು. ಹಂದಿ ಅಣ್ಣಿ ತನ್ನ 18ನೇ ವಯಸ್ಸಿಗೆ ರೌಡಿಶೀಟರ್ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದನು. ಕುಖ್ಯಾತ ರೌಡಿಗಳಾಗಿದ್ದ ಲವ ಹಾಗೂ ಕುಶ ಎಂಬ ಸಹೋದರರನ್ನು ಹತ್ಯೆ ಮಾಡಿದ ಆರೋಪ ಹಂದಿ ಅಣ್ಣಿ ಮೇಲಿತ್ತು. ನಂತರ ಮತ್ತೋರ್ವ ರೌಡಿ ಹೆಬ್ಬೆಟ್ಟು ಮಂಜನ ಶಿಷ್ಯನಾಗಿ ಗುರುತಿಸಿಕೊಂಡು ಕೊಲೆಗಳನ್ನು ಮಾಡಲು ಆರಂಭಿಸಿದ್ದ.

Comments are closed.