ಕರಾವಳಿ

ಕಾರಿನಲ್ಲಿ ವ್ಯಕ್ತಿಯ ಸುಟ್ಟು ಕೊಲೆ: ಆರೋಪಿಗಳು ನ್ಯಾಯಾಲಯಕ್ಕೆ ಹಾಜರು, ಆ.1ರವರೆಗೆ ನ್ಯಾಯಾಂಗ ಬಂಧನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಬೈಂದೂರು ತಾಲೂಕಿನ ಒತ್ತಿನೆಣೆ ಸಮೀಪದ ಹೇನಬೇರು ರಸ್ತೆಯಲ್ಲಿ ಕಾರು ಸಹಿತ ಕಾರ್ಕಳ ಮೂಲದ ಆನಂದ ದೇವಾಡಿಗ ಎನ್ನುವರನ್ನು ಸುಟ್ಟು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಆ.1 ತನಕ ನ್ಯಾಯಾಂಗ ಬಂಧನ ವಿಧಿಸಿ ಕುಂದಾಪುರ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಧನೇಶ್ ಮುಗಳಿ ಆದೇಶ ನೀಡಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಾಶ್ರೀ ವಾದಿಸಿದ್ದರು.

ಜು.12 ತಡರಾತ್ರಿ ಹೇನಬೇರು ರಸ್ತೆ ಬಳಿ ಈ ಅಮಾನುಷ ಘಟನೆ ನಡೆದಿದ್ದು ಮಾರನೇ ದಿನ ಘಟನೆ ಬೆಳಕಿಗೆ ಬಂದಿದ್ದು ಜು.14 ರಂದು ಬೆಳಿಗ್ಗೆ ಪ್ರಕರಣದ ಪ್ರಮುಖ ಆರೋಪಿಗಳಾದ ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30) ಹಾಗೂ ಇವರಿಗೆ ಪರಾರಿಯಾಗಲು ಸಹಕಾರ ನೀಡಿದ ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49), ನಿತಿನ್ ದೇವಾಡಿಗ (40) ಅವರನ್ನು ಬಂಧಿಸಲಾಗಿತ್ತು.

(ಕೊಲೆಯಾದ ಆನಂದ ದೇವಾಡಿಗ)

ಆನಂದ ದೇವಾಡಿಗ (60) ಎನ್ನುವರಿಗೆ ವಯಾಗ್ರ ಮಾತ್ರೆ ಎಂದು ನಂಬಿಸಿ ನಿದ್ರೆ ಮಾತ್ರೆ ಬೆರೆಸಿದ ಮದ್ಯ ನೀಡಿ ಪ್ರಜ್ಞೆ ತಪ್ಪಿಸಿ ಫೋರ್ಡ್ ಐಕಾನ್ ಕಾರಿನಲ್ಲಿ ಕಾರ್ಕಳದಿಂದ ಬೈಂದೂರು ಶಿರೂರು ಸಮೀಪದ ಹೇನಬೇರು ನಿರ್ಜನ ಪ್ರದೇಶಕ್ಕೆ ಕರೆತಂದು ಸುಟ್ಟುಹಾಕುವಲ್ಲಿ ಆರೋಪಿಗಳಾದ ಸದಾನಂದ ದೇವಾಡಿಗ ಹಾಗೂ ಶಿಲ್ಪಾ ಎನ್ನುವರು ಯಶಸ್ವಿಯಾಗಿದ್ದು ಇವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಇವರಿಗೆ ಸಹಕರಿಸಿದ ಸತೀಶ್ ದೇವಾಡಿಗ ಹಾಗೂ ನಿತಿನನ್ನು ಬಂಧಿಸಿ ಜೂ.15ಕ್ಕೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ 5 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪ್ರಮುಖ‌ ಆರೋಪಿಗಳಿಬ್ಬರ ಕಸ್ಟಡಿ ಅವಧಿ ಸೋಮವಾರಕ್ಕೆ ಮುಗಿದಿದ್ದು ಇನ್ನಿಬ್ಬರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಮಂಗಳವಾರಕ್ಕೆ ಮುಗಿಯಲಿತ್ತು. ಮಹಜರು, ಪಂಚನಾಮೆ, ಆರೋಪಿಗಳ ಹೇಳಿಕೆ, ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವ ಎಲ್ಲಾ ತನಿಖಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಈ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಪೊಲೀಸರ ತಂಡ ಸೋಮವಾರ ಸಂಜೆ ಕುಂದಾಪುರ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸದಾನಂದ, ಸತೀಶ್, ನಿತಿನ್ ನನ್ನು ಹಿರಿಯಡಕ ಸಬ್ ಜೈಲ್ ಹಾಗೂ ಮಹಿಳಾ ಆರೋಪಿಯಾದ ಕಾರಣ ಶಿಲ್ಪಾಳನ್ನು ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ.

ಯಾಕಾಗಿ ಈ ಕೊಲೆ..?
ಪ್ರಕರಣದ ಮೊದಲನೇ ಆರೋಪಿ ಸದಾನಂದ ಶೇರಿಗಾರ ಈ ಮೊದಲು ಖಾಸಗಿ ಸರ್ವೇಯರ್ ಆಗಿ‌ಕೆಲಸ ಮಾಡಿಕೊಂಡಿದ್ದು ಇದೀಗ ಕಲ್ಲು ಕ್ವಾರಿ ನಡೆಸುತ್ತಿದ್ದಾನೆ. ಸರ್ವೇಯರ್ ಆಗಿದ್ದ ವೇಳೆ ಅದಕ್ಕೆ ಸಂಬಂಧಿಸಿದಂತೆ 2019 ರಲ್ಲಿ ಸಿವಿಲ್ ವ್ಯಾಜ್ಯವೊಂದು ನ್ಯಾಯಾಲಯದ ಮೆಟ್ಟಿಲೇರಿದ್ದು ಚಾರ್ಜ್ ಶೀಟಿನಲ್ಲಿ ಸದಾನಂದ ಹೆಸರು ಉಲ್ಲೇಖಿಸಲಾಗಿತ್ತು. ಅದರ ಅಂತಿಮ ತೀರ್ಪಿನಲ್ಲಿ ತನಗೆ ಸಜೆಯಾಗುವ ಭಯದಿಂದ ತನ್ನದೇ ಕಾರಿನಲ್ಲಿ‌ ಆತ್ಮಹತ್ಯೆಗೆ ಶರಣಾದಂತೆ‌ ನಾಟಕ ಸೃಷ್ಟಿ ಮಾಡಿ ಸಂಚು ಮಾಡಿದ್ದು ಇದಕ್ಕೆ ಆತ‌ನ ಪ್ರೇಯಸಿ ಶಿಲ್ಪಾ ಸಹಕರಿಸಿದ್ದಳು. ಶಿಲ್ಪಾ ಪರಿಚಯದವರಾದ ಆನಂದ ದೇವಾಡಿಗರನ್ನು ಮನೆಗೆ ಕರೆಯಿಸಿ ವಯಾಗ್ರ ಎಂದು ನಂಬಿಸಿ ನಿದ್ರೆ ಮಾತ್ರೆ ಬೆರೆಸಿದ ಮದ್ಯ ಕುಡಿಸಿದ್ದು ಪ್ರಜ್ಞೆ ಕಳೆದುಕೊಂಡ ಅವರನ್ನು ಸದಾನಂದನ ಹಳೆ ಮಾಡೆಲ್ ಫೋರ್ಡ್ ಐಕಾನ್ ಕಾರಿನ ಹಿಂಬದಿಯಲ್ಲಿ ಕುಳ್ಳೀರಿಸಿಕೊಂಡು ಶಿಲ್ಪಾ ಹಾಗೂ ಸದಾನಂದ ಒತ್ತಿನೆಣೆಗೆ‌ ಬಂದು ಅಲ್ಲಿಯೇ ಹೆದ್ದಾರಿ ಸಮೀಪದ ಹೇನಬೇರು ರಸ್ತೆಯಲ್ಲಿ ಕಾರು ನಿಲ್ಲಿಸಿ‌ 8 ಲೀಟರ್ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಸುಮಾರು ಒಂದೂವರೆ ತಾಸು‌ ಕಾದಿದ್ದು ಸಂಪೂರ್ಣ ಕಾರು‌ ಹಾಗೂ ಮೃತದೇಹ ಸುಟ್ಟು ಕರಕಲಾಗಿರುವುದನ್ನು ಖಚಿತಪಡಿಸಿಕೊಂಡು ಮೊದಲೇ ತಿಳಿಸಿದಂತೆ ಸಂಬಂಧಿಗಳಾದ ಸತೀಶ್ ಹಾಗೂ ನಿತಿನ್ ತಂದಿದ್ದ ಎರ್ಟಿಗಾ ಕಾರಿನಲ್ಲಿ ಅಲ್ಲಿಂದ ಕಾರ್ಕಳದತ್ತ ತೆರಳುತ್ತಾರೆ. ಈ ಕೃತ್ಯಕ್ಕೆ ಮಲಯಾಳಂ ‘ಕುರುಪ್’ ಚಿತ್ರ ಸಹಿತ ಸದಾನಂದ ನೋಡುತ್ತಿದ್ದ ಅಪರಾಧ ಸಂಬಂಧಿತ ಧಾರವಾಹಿ, ಚಿತ್ರಗಳೇ ದುಷ್ಪ್ರೇರಣೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಕೊಂಚವೂ ಪಶ್ಚಾತಾಪವಿಲ್ಲ..!?
ಸುಟ್ಟು ಕೊಂದ ಆರೋಪಿಗಳಾದ ಸದಾನಂದ ಮತ್ತು ಶಿಲ್ಪಾಳನ್ನು ನ್ಯಾಯಾಲಯಕ್ಕೆ ಕರೆತಂದಿದ್ದು ಇಬ್ಬರು ಕೂಡ ಆವರಣದಲ್ಲಿ ಗುಸುಗುಸು ಮಾತನಾಡುತ್ತಿರುವುದು ಕಂಡುಬಂದಿದೆ. ಆರೋಪಿಗಳಿಬ್ಬರಲ್ಲಿ ಯಾವುದೇ ಪಶ್ಚಾತಾಪದ ಭಾವನೆಯಿಲ್ಲದಿದ್ದು ಸಾಮಾನ್ಯವಾಗಿಯೇ ಇದ್ದರು. ನ್ಯಾಯಾಲಯೊದಳಕ್ಕೆ ಪ್ರಕ್ರಿಯೆ ಮುಗಿದು ಹೊರಕ್ಕೆ ಕರೆತರುವಾಗಲು ಮಾಧ್ಯಮದ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದರು. ಬಳಿಕ ಸದಾನಂದನನ್ನು ಹಾಗೂ ಶಿಲ್ಪಾಳನ್ನು ಪ್ರತ್ಯೇಕ ಜೈಲಿಗೆ ಕರೆದೊಯ್ಯಬೇಕಾಗಿದ್ದರಿಂದ ವಾಹನದ ಬಳಿ ಹೋಗುವ ವೇಳೆ ಸದಾನಂದನಿಗೆ ಶಿಲ್ಪಾ ಕೈ ಬೀಸಿ ಬೈ ಹೇಳಿ ಬೀಳ್ಕೊಟ್ಟಳು.

 

 

Comments are closed.