ಕರ್ನಾಟಕ

ಹಿರಿಯ ನಟ ಅನಂತ್ ನಾಗ್ ಸೇರಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್

Pinterest LinkedIn Tumblr

ಬೆಂಗಳೂರು: ಕನ್ನಡದ ಹಿರಿಯ ನಟ ಅನಂತ್ ನಾಗ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.

ಅನಂತ್ ನಾಗ್, ಖ್ಯಾತ ಶಹನಾಯ್ ವಾದಕ ಬಿಸ್ಮಿಲ್ಲಾ ಖಾನ್ ಅವರ ಶಿಷ್ಯ ಎಸ್. ಬಲ್ಲೇಶ್ ಭಜಂತ್ರಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಶರತ್ ಶರ್ಮಾ ಅವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ನಿರ್ಧರಿಸಲಾಗಿದೆ ಎಂದು ವಿವಿಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ ತಿಳಿಸಿದ್ದಾರೆ.

ಜು. 15 ಶುಕ್ರವಾರ (ನಾಳೆ) ಕೋಲಾರದ ನಂದಿನಿ ಪ್ಯಾಲೇಸ್ ನಲ್ಲಿ ನಡೆಯುತ್ತಿರುವ ವಿವಿಯ ಘಟಿಕೋತ್ಸವದ ಸಮಾರಂಭದಲ್ಲಿ ಗೌರವ ಪ್ರದಾನ ಸಮಾರಂಭ ನಡೆಯಲಿದ್ದು, ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿ ಗೌರವಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸೇರಿ ಪ್ರಮುಖ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡ, ಹಿಂದಿ, ಮರಾಠಿ ಸೇರಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನಂತ ನಾಗ್ ನಟಿಸಿದ್ದಾರೆ. ಅವರು ಕಿರುತೆರೆ ಹಾಗೂ ರಂಗಭೂಮಿಯಲ್ಲೂ ಗುರುತಿಸಿಕೊಂಡಿದ್ದು ಕಳೆದ ಐದು ದಶಕಗಳ ಕಾಲ ಕರ್ನಾಟಕದ ಸಾಂಸ್ಕೃತಿಕ ರಂಗಕ್ಕೆ ಅನಂತನಾಗ್‌ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ ಕಲಾ ವಿಭಾಗದಲ್ಲಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.

Comments are closed.