ಕರ್ನಾಟಕ

ಕೋಟಿ-ಕೋಟಿ ಒಡೆಯ ಚಂದ್ರಶೇಖರ ಗುರೂಜಿ ಹತ್ಯೆಗೆ ಕಾರಣವಾಯ್ತು ಮಹಿಳಾ‌ ಉದ್ಯೋಗಿ ಹೆಸರಲ್ಲಿ ಮಾಡಿದ ಬೇನಾಮಿ ಆಸ್ತಿ ..?; 5 ಕೋಟಿ ಆಸ್ತಿ ಕೇಳಿದ್ದಕ್ಕೆ ಖಲ್ಲಾಸ್..!?

Pinterest LinkedIn Tumblr

ಹುಬ್ಬಳ್ಳಿ: ಸರಳ ವಾಸ್ತುತಜ್ಞ ಖ್ಯಾತಿಯ ಚಂದ್ರಶೇಖರ ಗುರೂಜಿ (57) ಅವರನ್ನು ಇಲ್ಲಿನ ಉಣಕಲ್‌ ಕ್ರಾಸ್‌ನಲ್ಲಿರುವ ದಿ ಪ್ರೆಸಿಡೆಂಟ್‌ ಹೋಟೆಲ್‌ನ ರಿಸೆಪ್ಶನ್‌ ಬಳಿ ಅವರ ಇಬ್ಬರು ಆಪ್ತರೇ ಮಂಗಳವಾರ ಮಧ್ಯಾಹ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಕಲಘಟಗಿ ತಾಲ್ಲೂಕಿನ ದುಮ್ಮವಾಡದ ಮಹಾಂತೇಶ ಶಿರೂರ ಮತ್ತು ಧಾರವಾಡದ ಮಂಜುನಾಥ ಮರೇವಾಡ ಆರೋಪಿಗಳು.

ಘಟನೆಗೆ ಸಂಬಂಧಿಸಿದಂತೆ ಗುರೂಜಿ ಅವರ ಸಹೋದರನ ಮಗ ಸಂಜಯ್‌ ಅಂಗಡಿ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹತ್ಯೆ ಆರೋಪಿಗಳಾದ ಮಹಾಂತೇಶ ಮತ್ತು ಮಂಜುನಾಥ ಗುರೂಜಿ ಅವರ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಗಳು. ಅಲ್ಲಿಯೇ ಉದ್ಯೋಗ ಮಾಡುತ್ತಿದ್ದ ವನಜಾಕ್ಷಿ ಜೊತೆ ಮಹಾಂತೇಶ ಮದುವೆಯಾಗಿದ್ದ. ಗುರೂಜಿ ಅವರ ಎಲ್ಲ ವ್ಯವಹಾರಗಳು ಮೂವರಿಗೂ ತಿಳಿದಿತ್ತು. ಅಲ್ಲದೆ, ವನಜಾಕ್ಷಿ ಗುರೂಜಿಗೆ ಆಪ್ತಳಾಗಿದ್ದು, ಅವರ ಹೆಸರಲ್ಲಿ ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‌ಮೆಂಟ್‌ ಸೇರಿದಂತೆ ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು.

ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿರುವ ಕುರಿತು ಪ್ರಶ್ನಿಸಿದಾಗ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಆಸ್ತಿ ಹಾಳಾಗುತ್ತಿದೆ ಎಂದು ಗುರೂಜಿ ಅವರು, ನೋಂದಣಿ ಮಾಡಿರುವ ಆಸ್ತಿಗಳನ್ನು ಮರಳಿಸುವಂತೆ ಕೇಳಿದಾಗ ಗಲಾಟೆ ಆರಂಭವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ವನಜಾಕ್ಷಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಈ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ದೇಶಾದ್ಯಂತ ಸರಳ ವಾಸ್ತು ಬಗ್ಗೆ ಸಲಹೆ ನೀಡುತ್ತಿದ್ದ ಗುರೂಜಿ ಅವರು ಮುಂಬೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕಚೇರಿ ತೆರೆದಿದ್ದರು. ಚಂದ್ರಶೇಖರ ಗುರೂಜಿ ಸಾವಿರಾರು ಕೋಟಿ ಒಡೆಯನಾಗಿದ್ದು, ವನಜಾಕ್ಷಿ ಜೊತೆಗೆ ಚಂದ್ರಶೇಖರ ಗುರುಜಿ ಅತ್ಯಂತ ಸಲುಗೆ ಹೊಂದಿದ್ದರು ಎನ್ನಲಾಗಿದೆ.

ತನ್ನ ಸಂಸ್ಥೆಯಲ್ಲಿ ಒಬ್ಬ ಸಾಮಾನ್ಯ ಉದ್ಯೋಗಿ ಜೊತೆಗೆ ಅಷ್ಟೊಂದು ಆಸ್ತಿ ವಹಿವಾಟು ಹೊಂದುವಷ್ಟು ಸಲುಗೆ ಹೊಂದಿದ್ದು ಭಾರೀ ಚರ್ಚೆಗೆ ಮತ್ತು ಅನುಮಾನಕ್ಕೆ ಗ್ರಾಸವಾಗಿದೆ.

Comments are closed.