ಕರಾವಳಿ

ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ನೇತೃತ್ವ ಕಾರ್ಯಾಚರಣೆ: ಗಾಂಜಾ, ಎಂಡಿಎಂಎ ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರ ಬಂಧನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ ಅವರಿಗೆ ಬಂದ ಖಚಿತ ವರ್ತಮಾನದಂತೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಅವರ ಉಪಸ್ಥಿತಿಯಲ್ಲಿ ಗಾಂಜಾ ಹಾಗೂ ನಿಷೇಧಿತ ವಸ್ತುವಾದ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದ ಘಟನೆ ಬೈಂದೂರು ಯಡ್ತರೆ ಗ್ರಾಮದ ರಾಹುತನಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ನಡೆದಿದೆ.

(ಬಂಧಿತ ಆರೋಪಿಗಳು)

ಉತ್ತರಕನ್ನಡ ಜಿಲ್ಲೆ ಭಟ್ಕಳ ತಾಲೂಕು ಬದ್ರಿಯಾ ಕಾಲನಿ ನಿವಾಸು ಅಬ್ದುಲ್ ರೆಹಮಾನ್ (31), ಉಡುಪಿ‌ ಶಿರ್ವ‌ ನಿವಾಸಿ ಅಬ್ದುಲ್ ಸಮದ್ (30) ಬಂಧಿತರಾಗಿದ್ದು ಇವರಿಬ್ಬರು ಈ ಮಾದಕ ವಸ್ತುವನ್ನು ಸಲೀಮ್ ಮಂಚಿ ಎನ್ನುವಾತನಿಂದ ಖರೀದಿಸಿ ತಂದಿದ್ದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಬ್ಬರಿಂದ ಪ್ಲಾಸ್ಟಿಕ್ ತೊಟ್ಟೆಯಲ್ಲಿದ್ದ 30 ಗ್ರಾಂ ತೂಕದ 25 ಸಾವಿರ ಮೌಲ್ಯದ ಗಾಂಜಾ,‌ 11.420 ಗ್ರಾಂ ತೂಕದ 11 ಸಾವಿರ ಮೌಲ್ಯದ ಎಂಡಿಎಂಎ ಹರಳು, 4 ಲಕ್ಷ ಮೌಲ್ಯದ ಕಾರು, ಮೊಬೈಲ್ ಫೋನುಗಳ, ತೂಕದ ಮೆಷಿನ್, 1080 ರೂ. ನಗದು, ವೆಲಾಸಿಟಿ ಎಂದು ಬರೆದಿರುವ ಕಪ್ಪು ಬಣ್ಣದ ಪೌಚ್ ವಶಕ್ಕೆ ಪಡೆಯಲಾಗಿದೆ.

(ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ.)

(ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ)

ಘಟನೆ ವಿವರ: ಜು. 5 ರಂದು ಮಧ್ಯಾಹ್ನದ ಸುಮಾರಿಗೆ ವೃತ್ತ ನಿರೀಕ್ಷಕರಿಗೆ ಕರೆಯೊಂದು ಬಂದಿದ್ದು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಇಬ್ಬರು ಆರೋಪಿಗಳು ಗಾಂಜಾ ಹಾಗೂ ಮಾದಕ ವಸ್ತು ತೆಗೆದುಕೊಂಡು, ಭಟ್ಕಳ ಕಡೆ ಸಾಗಾಟ ಮಾಡುತ್ತಿದ್ದು ಮಧ್ಯಾಹ್ನ ಪುನಃ ಬರುವುದಾಗಿ ಮಾಹಿತಿ‌ ನೀಡಿದ್ದರು. ಅದರಂತೆ ಕುಂದಾಪುರ ಡಿವೈಎಸ್ಪಿ ಅವರಿಗೆ ಮಾಹಿತಿ ನೀಡಿ, ಕಾನೂನು‌ ಪ್ರಕಾರವಾಗಿ ಸಿಬ್ಬಂದಿಗಳೊಂದಿಗೆ ಬೈಂದೂರಿನ ರಾಹುತನಕಟ್ಟೆ ಎಂಬಲ್ಲಿ ಇಲಾಖೆ ವಾಹನಗಳನ್ನು ನಿಲ್ಲಿಸಿಕೊಂಡು ವಾಹನ ತಪಾಸಣೆ ನಡೆಸಲಾಗಿತ್ತು.

ಈ ವೇಳೆ‌ ಕುಂದಾಪುರ ಕಡೆಯಿಂದ ಕೆ.ಎ.21 ಎನ್.7476 ನೋಂದಣಿಯ ಮೊದಲೇ ಮಾಹಿತಿಯಿದ್ದ ಮಾರುತಿ ಸ್ವಿಫ್ಟ್ ಕಾರು ಬಂದಿದ್ದು ಆ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಕಾರಿನಿಂದ ಓಡಲು ಪ್ರಯತ್ನಿಸಿದಾಗ, ಸಿಬ್ಬಂದಿಗಳ ಸಹಾಯದಿಂದ ಅಬ್ದುಲ್ ರೆಹಮಾನ್, ಅಬ್ದುಲ್ ಸಮದ್ ಎನ್ನುವರನ್ನು ವಶಕ್ಕೆ ಪಡೆದು ಡಿವೈಎಸ್ಪಿ ಸಮಕ್ಷಮ ಅಬ್ದುಲ್ ರೆಹಮಾನ್ ಎನ್ನುವಾತನನ್ನು ಅಂಗಶೋಧನೆ ಮಾಡಿದಾಗ ಆತನ ಪ್ಯಾಂಟ್ ಕಿಸೆಯಲ್ಲಿ ಗಾಂಜಾ ಹಾಗೂ ಅಬ್ದುಲ್ ಸಮದ್ ನ ಅಂಗ ಶೋಧನೆ ಮಾಡಿದಾಗ ಆತನ ಪ್ಯಾಂಟ್ ಕಿಸೆಯಲ್ಲಿ ಕನ್ನಡಕವನ್ನು ಇರಿಸುವ ಕಪ್ಪು ಬಣ್ಣದ ಪೌಚ್ ನಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಎಂಡಿಎಎ ಮಾದಕವಸ್ತು, ಹಾಗೂ ವೆಲಾಸಿಟಿ ಎಂದು ಬರೆದಿರುವ ಕಪ್ಪು ಬಣ್ಣದ ಪೌಚ್ ಪತ್ತೆಯಾಗಿದೆ. ನಗದು ಹಣ, ಮಾದಕ ವಸ್ತುಗಳು ಹಾಗೂ ಇದನ್ನು ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಕಂಪೆನಿಯ ಬಿಳಿ ಬಣ್ಣದ ಕಾರು, ವೇಯಿಂಗ್ ಮೆಷಿನ್ ವಶಕ್ಕೆ ಪಡೆಯಲಾಗಿದೆ. ಈ ಗಾಂಜಾ ಮಾದಕ ವಸ್ತುವನ್ನು ಮಂಚಿಯ ಸಲೀಮ್ ಎನ್ನುವಾತನಿಂದ ಖರೀದಿಸಿ ತಂದಿದ್ದಾಗಿ ಆರೋಪಿಗಳು‌ ವಿಚಾರಣೆ ವೇಳೆ ತಿಳಿಸಿದ್ದಾರೆ.

ಈ ಬಗ್ಗೆ ಬಂಧಿತ ಇಬ್ಬರು ಹಾಗೂ ಮಂಚಿ ಸಲೀಮ್ ಸೇರಿ ಮೂರು ಮಂದಿ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.