ಕರಾವಳಿ

ಮರವಂತೆ ಬೀಚ್’ಗೆ ಬಿದ್ದ ಕಾರು: ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ, ಇಬ್ಬರಿಗೆ ಗಾಯ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಮರವಂತೆಯ ವರಾಹಸ್ವಾಮಿ ದೇವಸ್ಥಾನದ ಬಳಿ ನಿಯಂತ್ರಣ ತಪ್ಪಿದ ಸ್ವಿಪ್ಟ್ ಕಾರೊಂದು ಹೆದ್ದಾರಿಯಿಂದ
ಸಮುದ್ರಕ್ಕೆ ಬಿದ್ದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ‌.

ಕಾರಿನಲ್ಲಿ ನಾಲ್ವರಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಕುಂದಾಪುರ ಮೂಲದ ವಿರಾಜ್ ಆಚಾರ್ (28)‌ ಮೃತ ಯುವಕ. ರೋಶನ್ ಎನ್ನುವಾತ ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ ಕಾರ್ತಿಕ್ ಹಾಗೂ ಸಂದೇಶ ಎನ್ನುವ ಇಬ್ಬರು ಯುವಕರಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂದಾಪುರದ ಕೋಟೇಶ್ವರ ಸಮೀಪದಿಂದ ಬೈಂದೂರು ಕಡೆಗೆ ಕಾರು ತೆರಳುತ್ತಿತ್ತು ಎನ್ನಲಾಗಿದೆ. ಈ ವೇಳೆ‌ ಚಾಲಕನ‌ ನಿಯಂತ್ರಣ ತಪ್ಪಿದ ಕಾರು ಸಮುದ್ರಕ್ಕೆ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ. ಕಾರು ನಜ್ಜುಗುಜ್ಜಾಗಿದ್ದು ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ಸಿಬಂದಿ ಹಾಗೂ ಸ್ಥಳಿಯರ ಸಹಕಾರದೊಂದಿಗೆ ಭಾನುವಾರ ಮುಂಜಾನೆ ವೇಳೆಗೆ ಕಾರನ್ನು ಮೇಲಕ್ಕೆತ್ತಲಾಗಿದೆ.‌ ನಾಪತ್ತೆಯಾದ ಯುವಕನಿಗೆ ಶೋಧ ನಡೆಸಲಾಗುತ್ತಿದೆ.

ಕುಂದಾಪುರದ ಡಿವೈಎಸ್ಪಿ ಶ್ರೀಕಾಂತ್ ಕೆ, ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ‌ ಠಾಣಾಧಿಕಾರಿ ವಿನಯ್ ಕುಮಾರ್ ಕೊರ್ಲಹಳ್ಳಿ ಮೊದಲಾದವರು ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ.

ಗಂಗೊಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

Comments are closed.