ಕರಾವಳಿ

ಮುಂಬೈ-ಮಂಗಳೂರು‌ ಬಸ್ಸಿನಲ್ಲಿ 18 ಲಕ್ಷ‌ ಮೌಲ್ಯದ ಚಿನ್ನಕ್ಕೆ ಕನ್ನ; ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬೈಂದೂರು ಪೊಲೀಸರು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಉಡುಪಿ‌ ಜಿಲ್ಲೆಯ ಬೈಂದೂರು ಸಮೀಪದ ಶಿರೂರು ಎಂಬಲ್ಲಿ ಜೂ.16ರಂದು ಬೆಳಗಿನ ಉಪಾಹಾರಕ್ಕೆಂದು ಬಸ್ ನಿಲ್ಲಿಸಿದ್ದಾಗ 466.960 ಗ್ರಾಂ ತೂಕದ ಅಂದಾಜು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಬಂಧಿತರಾದ ನಾಲ್ವರು ಆರೋಪಿಗಳು ಈ ತನಕ ಪೊಲೀಸ್ ಕಸ್ಟಡಿಯಲ್ಲಿದ್ದು ಸೋಮವಾರ ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಪೊಲೀಸರ ತಂಡ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ನಾಲ್ವರು ಆರೋಪಿಗಳಿಗೆ ಜುಲೈ 8  ತನಕ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಚಿನ್ನವನ್ನು ಮುಂಬೈಯಿಂದ ಮಂಗಳೂರಿನಲ್ಲಿ ಮಾರಾಟಕ್ಕಾಗಿ ಖಾಸಗಿ ಬಸ್‌ನಲ್ಲಿ ತರುತಿದ್ದ ವೇಳೆ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು. ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದ ಪೊಲೀಸರ ತಂಡ ಮಹಾರಾಷ್ಟ್ರದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದು, ಆರೋಪಿಗಳಿಂದ ಸಂಪೂರ್ಣ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಬಂಧಿತರೆಲ್ಲರೂ‌ ನಟೋರಿಯಸ್ ಆರೋಪಿಗಳಾಗಿದ್ದು ಈ ಹಿಂದೆ ಹಲವು ಪ್ರಕರಣದಲ್ಲಿ ಭಾಗಿಯಾದವರು ಎನ್ನಲಾಗಿದೆ.

ಮಧ್ಯಪ್ರದೇಶ ಧಾರ್ ಜಿಲ್ಲೆ ಧರ್ಮಪುರಿ ತಾಲೂಕಿನ ಸಿಂಧಿ ಮೊಹಲ್ಲಾದ ಅಲಿಖಾನ್ (31), ಸಿಂಧಿ ಮೊಹಲ್ಲಾದವರೇ ಆದ ಅಮ್ಮದ್ ಖಾನ್ (33), ಧಾರ್ ಜಿಲ್ಲೆ ಮನವೂರು ತಾಲೂಕು ಖೇರ್ವಜಾಗೀರ್ ಗ್ರಾಮದ ಇಕ್ರಾರ್ ಖಾನ್ (30) ಹಾಗೂ ಮರವೂರು ತಾಲೂಕು ಬ್ರಾಹ್ಮರಿ ಗ್ರಾಮದ ಗೋಪಾಲ್ ಅಮ್ಲಾವಾರ್ (35) ಆರೋಪಿಗಳಾಗಿದ್ದು ಕೃತ್ಯ ನಡೆದ ಕೆಲವೇ ದಿಮದಲ್ಲಿ ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.

ಪೊಲೀಸರ ಕಾರ್ಯಕ್ಕೆ ಶ್ಲಾಘನೆ..
ಪ್ರಕರಣದ ತರುವಾಯ ಆರೋಪಿಗಳ ಪತ್ತೆಗೆ ಮುಂದಾದ ಪೊಲೀಸರ ತಂಡಕ್ಕೆ ಇದೊಂದು ಸವಾಲಿನ ಪ್ರಕರಣವಾಗಿತ್ತು. ಪಾಸ್ಟ್ ಟ್ಯಾಗ್ ಆರೋಪಿಗಳ ಜಾಡು ಹಿಡಿಯುವಲ್ಲಿ ಮಹತ್ವದ ಸುಳಿವು ನೀಡಿತ್ತು. ಮಹಾರಾಷ್ಟ್ರಕ್ಕೆ ತೆರಳಿದ ಪೊಲೀಸರ ತಂಡ ಜೂ.19ರಂದು ಮಹಾರಾಷ್ಟ್ರದ ದುಲೆ ಜಿಲ್ಲೆಯ ಸೋನ್‌ಗಿರ್ ಟೋಲ್‌ಗೇಟ್‌ನಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿತ್ತು. ಗಂಗೊಳ್ಳಿ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್‌ಐ ವಿನಯ ಎಂ.ಕೊರ್ಲಹಳ್ಳಿ ಅವರ‌ ನೇತೃತ್ವದ ಪೊಲೀಸರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ ಬಂಧಿತರಿಂದ ಒಟ್ಟು 18 ಲಕ್ಷರೂ.ಮೌಲ್ಯದ 466.960 ಗ್ರಾಂ ಚಿನ್ನಾಭರಣ ಅಲ್ಲದೇ ಅವರು ಬಳಸಿದ್ದ ಎಂಟು ಲಕ್ಷ ರೂ. ಮೌಲ್ಯದ ಬ್ರೀಜಾ ಕಾರು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು  ವಶ ಪಡಿಸಿಕೊಂಡಿದ್ದಾರೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ.ಸಿದ್ಧಲಿಂಗಪ್ಪ ಹಾಗೂ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ. ಇವರ ಸೂಚನೆಯಂತೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

Comments are closed.