ಕರ್ನಾಟಕ

ಡಿನೋಟಿಫಿಕೇಷನ್ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಯಡಿಯೂರಪ್ಪ, ಜಾಮೀನು ಕೋರಿ ಅರ್ಜಿ ಸಲ್ಲಿಕೆ

Pinterest LinkedIn Tumblr

ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶುಕ್ರವಾರ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಹಿರಿಯ ವಕೀಲ ಸಿ.ವಿ ನಾಗೇಶ್ ಅವರೊಂದಿಗೆ ಆಗಮಿಸಿದ ಯಡಿಯೂರಪ್ಪ ಅವರು, ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಧೀಶ ಬಿ. ಜಯಂತಕುಮಾರ್ ಅವರು, ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೂರುದಾರರ ಪರ ವಕೀಲರಿಗೆ ಸೂಚಿಸಿದ್ದಾರೆ.ಜಾಮೀನು ಅರ್ಜಿಯನ್ನು ಪರಿಶೀಲಿಸಿದ ನಂತರ ಪ್ರತಿಕ್ರಿಯೆ ಸಲ್ಲಿಸಲಾಗುವುದು ಎಂದು ದೂರುದಾರರ ಪರ ವಕೀಲ ಕೆ.ವಿ ಧನಂಜಯ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಜಾಮೀನು ವಿರೋಧಿಸಲು ಕಾರಣಗಳಿದ್ದರೆ, ಆಕ್ಷೇಪಣೆ ಸಲ್ಲಿಸಲಾಗುವುದು. ಅದಕ್ಕಾಗಿ ಸಮಯ ನೀಡಿ ಎಂದು ಕೆವಿ ಧನಂಜಯ್ ಅವರು ಕೋರಿದರು. ನಂತರ ಪ್ರಕರಣದ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಲಾಯಿತು.

2013ರಲ್ಲಿ ವಾಸುದೇವ ರೆಡ್ಡಿ ಎಂಬವರು ಸಲ್ಲಿಸಿದ್ದ ಖಾಸಗಿ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ವಿಶೇಷ ನ್ಯಾಯಾಲಯ ಸಮನ್ಸ್ ನೀಡಿತ್ತು.

Comments are closed.