ಕರಾವಳಿ

ಕುಂದಾಪುರದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಟಿ.ಕೆ ಕೋಟ್ಯಾನ್ ವಿಧಿವಶ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕುಂದಾಪುರ ಮಾಜಿ ತಾಲೂಕು ಪಂಚಾಯತ್ ಸದಸ್ಯ, ವಿವಿಧ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಮುಂದಾಳು ಟಿ.ಕೆ. ಕೋಟ್ಯಾನ್ (50) ಅವರು ಹೃದಯಾಘಾತದಿಂದ ಶುಕ್ರವಾರ ಮುಂಜಾನೆ ವೇಳೆಗೆ ತಲ್ಲೂರಿನ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.

ತಲ್ಲೂರು ಚಿಕ್ಕುಮನೆ ನಿವಾಸಿಯಾಗಿರುವ ತಲ್ಲೂರು ಕೋಟಿ ಕೋಟ್ಯಾನ್ ಈ ಭಾಗದಲ್ಲಿ ಟಿ.ಕೆ. ಕೋಟ್ಯಾನ್ ಎಂದು ಕರೆಯಲ್ಪಡುತ್ತಿದ್ದರು. ಬಾಲ್ಯದಲ್ಲಿಯೇ ಕ್ರೀಡಾ‌ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅವರು ಕಾಲೇಜು ವಿದ್ಯಾಭ್ಯಾಸದ ವೇಳೆ ಲಾಂಗ್ ಜಂಪ್’ನಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು. ಬಿ.ಕಾಂ ಪದವಿಧರರಾದ ಇವರು ಸಹಕಾರಿ ಸಂಘದಲ್ಲಿ ಉದ್ಯೋಗ ಆರಂಭಿಸಿದ್ದು ಇದೀಗಾ ತಲ್ಲೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ಸಹಾಯಕ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾಗಿ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದ ಅವರು ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರ ನಿಕಟವರ್ತಿಯಾಗಿದ್ದರು.

ಶ್ರೀ ನಾರಾಯಣ ಗುರು ಯುವಕ ಮಂಡಲ (ರಿ) ಕುಂದಾಪುರ ಇದರ ಬೆಳ್ಳಿ ಹಬ್ಬದ ಅಧ್ಯಕ್ಷರು, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಕೋಶಾಧಿಕಾರಿಯಾಗಿದ್ದು ಪ್ರಸ್ತುತ ಮಂಡಳಿ ಸದಸ್ಯರಾಗಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ಸಮಿತಿ ತಲ್ಲೂರು ಇದರ ಮಾಜಿ ಅಧ್ಯಕ್ಷರು, ತಲ್ಲೂರು ಹಾಲು‌ ಉತ್ಪಾದಕರ ಸಂಘದ ಸ್ಥಾಪಕಾಧ್ಯಕ್ಷರಾಗಿ, ತಲ್ಲೂರು ಸಮುದಾಯ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ, ಸಮಾಜದ ವಿವಿಧ ಸೇವಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಕೇಬಲ್ ಆಪರೇಟಿಂಗ್ ಸಂಸ್ಥೆ ಕೂಡ ನಡೆಸುತ್ತಿದ್ದ ಅವರು ಇತ್ತೀಚೆಗೆ‌ ಅನಾರೋಗ್ಯಕ್ಕೆ ತುತ್ತಾಗಿ ಚೇತರಿಸಿಕೊಳ್ಳುತ್ತಿದ್ದರು.

ಮೃತರ ನಿಧನಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕಂಬನಿ ಮಿಡಿದಿದ್ದಾರೆ. ತಲ್ಲೂರು ಗ್ರಾ.ಪಂ ಅಧ್ಯಕ್ಷೆ ಭೀಮವ್ವ, ಉಪಾಧ್ಯಕ್ಷ ಗಿರೀಶ್, ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಉದಯ ಕುಮಾರ್ ತಲ್ಲೂರು, ಗ್ರಾ.ಪಂ ಸದಸ್ಯರು, ಮಾಜಿ ಗ್ರಾ.ಪಂ ಅಧ್ಯಕ್ಷ ಆನಂದ ಬಿಲ್ಲವ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಪದಾಧಿಕಾರಿಗಳು, ಹೆಮ್ಮಾಡಿ ಮೂರ್ತೇದಾರರ ಸಂಘದ ಆಡಳಿತ ವ್ಯವಸ್ಥಾಪಕ ಕೃಷ್ಣ ಬಿ., ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ರೈತ ಸಂಘದ‌ ಮುಖಂಡ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಮೊದಲಾದವರು ಆಗಮಿಸಿ ‌ಮೃತರ ಅಂತಿಮ ದರ್ಶನ ಪಡೆದರು.

Comments are closed.