ಪ್ರಮುಖ ವರದಿಗಳು

ಸಂಗೀತ ಕಾರ್ಯಕ್ರಮದ ಬಳಿಕ ಖ್ಯಾತ ಬಾಲಿವುಡ್ ಗಾಯಕ ಕೆಕೆ ಕುಸಿದು ಬಿದ್ದು ಸಾವು

Pinterest LinkedIn Tumblr

ಕೋಲ್ಕತ್ತಾ: ಖ್ಯಾತ ಬಾಲಿವುಡ್ ಗಾಯಕ, ಕೆಕೆ ಎಂದೇ ಹೆಸರಾಗಿದ್ದ ಕೃಷ್ಣಕುಮಾರ್ ಕುನ್ನತ್ ಅವರು ಮಂಗಳವಾರ ರಾತ್ರಿ ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ನಂತರ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

53 ವರ್ಷದ ಗಾಯಕ ಕೋಲ್ಕತ್ತಾದ ನಜ್ರುಲ್ ಮಂಚಾ ಆಡಿಟೋರಿಯಂನಲ್ಲಿ ಸಂಗೀತ ಕಚೇರಿ ನಡೆಸಿದ ನಂತರ ತಾವು ತಂಗಿದ್ದ ಹೋಟೆಲ್ ಗೆ ತೆರಳುತ್ತಿದ್ದಾಗ ಮೆಟ್ಟಿಲ ಮೇಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸಂಗೀತ ಕಚೇರಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಹಾಡಿದ್ದ ಕೆಕೆ ಅವರು ಹೋಟೆಲ್ ತಲುಪಿದ ನಂತರ ಅಸ್ವಸ್ಥರಾಗಿದ್ದರು. ಅವರನ್ನು ದಕ್ಷಿಣ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದಾಗಲೇ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ತೀರಾ ಸುಸ್ತು ಕಾಣಿಸಿಕೊಂಡ ಪರಿಣಾಮ ಕಾನ್ಸರ್ಟ್‌ನಿಂದ ಕೃಷ್ಣಕುಮಾರ್ ಕುನ್ನತ್ ತಮ್ಮ ಹೋಟೆಲ್ ರೂಮ್‌ಗೆ ಹಿಂದಿರುಗಿದರು. ಹೋಟೆಲ್‌ನಲ್ಲಿನ ಮೆಟ್ಟಿಲುಗಳನ್ನು ಹತ್ತುವಾಗ ಕುನ್ನತ್ ಕುಸಿದುಬಿದ್ದರು ಎಂದು ವರದಿಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅರೂಪ್ ಬಿಸ್ವಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೃಷ್ಣಕುಮಾರ್ ಕುನ್ನತ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ‘ ‘ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನವಾರ್ತೆ ಮನಸ್ಸಿಗೆ ನೋವು ತರಿಸಿದೆ. ಕೃಷ್ಣಕುಮಾರ್ ಕುನ್ನತ್ ‘ಕೆಕೆ’ ಅಂತಲೇ ಜನಪ್ರಿಯತೆ ಪಡೆದಿದ್ದರು. ಕೆಕೆ ಅವರ ಹಾಡುಗಳಲ್ಲಿ ಎಲ್ಲಾ ರೀತಿಯ ಭಾವನೆಗಳು ಇರುತ್ತಿದ್ದವು. ಎಲ್ಲಾ ವಯೋಮಾನದವರನ್ನು ತಮ್ಮ ಹಾಡುಗಳ ಮೂಲಕ ಕೆಕೆ ರಂಜಿಸಿದ್ದರು. ಕೆಕೆ ಅವರ ಹಾಡುಗಳ ಮೂಲಕ ಅವರನ್ನು ಸದಾ ನೆನಪಿಸಿಕೊಳ್ಳುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

 

Comments are closed.