ಕರಾವಳಿ

ಕಡಲಬ್ಬರಕ್ಕೆ ಸಿಲುಕಿದ ದೋಣಿ: ಶಿರೂರಿನ ಐವರು ಮೀನುಗಾರರ ರಕ್ಷಣೆ

Pinterest LinkedIn Tumblr

ಉಡುಪಿ: ಕಡಲಿನ ಅಬ್ಬರಕ್ಕೆ ಸಿಲುಕಿ ಮುರಿದುಬಿದ್ದ ದೋಣಿಯಲ್ಲಿ ಸಿಲುಕಿದ್ದ ಐವರು ಮೀನುಗಾರರನ್ನು ರಕ್ಷಿಸಿರುವ ಘಟನೆ ಬೈಂದೂರು ತಾಲೂಕಿನ ಶಿರೂರು ಎಂಬಲ್ಲಿ ನಡೆದಿದೆ.

ಶಿರೂರಿನ ಮುಸ್ತಕ್ ಎಂಬವರ ಬೀಬಿ‌ ಅಮೀನ ಹೆಸರಿನ ಗಿಲ್ ನೆಟ್ ದೋಣಿಯಲ್ಲಿ ಐವರು ಮೀನುಗಾರರು ಶಿರೂರಿನಿಂದ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಕಡಲಿನ ಅಬ್ಬರಕ್ಕೆ ದೋಣಿ ಎರಡು ಭಾಗವಾಗಿದೆ ಎಂದು ತಿಳಿದುಬಂದಿದೆ.

ಇದರಲ್ಲಿ ಸಿಲುಕಿಕೊಂಡಿದ್ದ ಮೀನುಗಾರರು ತಕ್ಷಣ ವೈರ್ ಲೆಸ್ ಮೂಲಕ ಸಂಬಂಧಪಟ್ಟರಿಗೆ ಮಾಹಿತಿ ನೀಡಿದರು. ಈ ಮಾಹಿತಿ ಸಮೀಪದಲ್ಲಿದ್ದ ಇರ್ಫಾನ್ ಎಂಬವರ ಸೈಫಾ ಬೋಟಿನಲ್ಲಿದ್ದ ಮೀನುಗಾರರಿಗೆ ನೀಡಲಾಯಿತು.

ಅಲ್ಲಿಯವರೆಗೆ ಈ ಐವರು ಮೀನುಗಾರರು ಬೋಟಿನ ಒಂದು ಭಾಗವನ್ನು ಹಿಡಿದುಕೊಂಡು ಅಪಾಯದ ಸ್ಥಿತಿಯಲ್ಲಿದ್ದರು. ಸುಮಾರು 2 ತಾಸುಗಳ ಬಳಿಕ ಸೈಫಾ ಬೋಟು ಸ್ಥಳಕ್ಕೆ ಆಗಮಿಸಿತು.

ಅಪಾಯದಲ್ಲಿ ಸಿಲುಕಿದ್ದ ಬೋಟಿನಲ್ಲಿದ್ದ ಶೀರೂರು ಕಳಿಹಿತ್ಲು ಮುಷ್ತಕ್ (52), ಅಶ್ರಫ್ (37), ಶಬ್ಬೀರ್ (50), ಗೌಸಿಯಾ ಮೊಹಲ್ಲಾದ ಅಬೂಬಕ್ಕರ್ (55), ಬೊಂಬ ಮೀರಾ (47) ಎಂಬವರನ್ನು ರಕ್ಷಿಸಿ ತೀರಕ್ಕೆ ಕರೆದು ಕೊಂಡು ಬರಲಾಯಿತು ಎಂದು ತಿಳಿದುಬಂದಿದೆ.

ಘಟನೆಯಲ್ಲಿ ದೋಣಿ ಮತ್ತು ಬಲೆ ಮೊದಲಾದ ಪರಿಕರಗಳು ಹಾನಿಯಾಗಿದೆ. ಇದರಿಂದ ಸುಮಾರು ಹತ್ತು ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

Comments are closed.