ಕರ್ನಾಟಕ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ: ಬಿ.ಎಸ್ ಯಡಿಯೂರಪ್ಪ ಅವರಿಂದ ಸಿಎಂಗೆ ಪತ್ರ..!

Pinterest LinkedIn Tumblr

ಶಿವಮೊಗ್ಗ: ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವುದು ಬೇಡ ಎಂದು ಮಾಜಿ ಸಿಎಂ ಬಿ
ಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೆಸರಿಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡುವುದನ್ನು ಯಡಿಯೂರಪ್ಪ ಅವರು ವಿನಪುರ್ವಕವಾಗಿ ತಿರಸ್ಕರಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭಾನುವಾರ ಪತ್ರ ಬರೆದಿರುವ ಬಿಎಸ್ ವೈ, ಶಿವಮೊಗ್ಗ ಜಿಲ್ಲೆಯಲ್ಲಿ ಬಹುದಿನಗಳ ಕನಸಾದ ವಿಮಾನ ನಿಲ್ದಾಣವು ಈಗ ನನಸಾಗುತ್ತಿರುವುದಕ್ಕೆ ಬೊಮ್ಮಾಯಿ ಅವರಿಗೆ ಧನ್ಯವಾದ ಅರ್ಪಿಸಿದ್ದು, ಹೊಸ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡುವ ಬಗ್ಗೆ ಘೋಷಿಸಿರುವುದನ್ನು ಪ್ರಸ್ತಾಪಿಸಿದ್ದಾರೆ.

‘ರಾಷ್ಟ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಅನೇಕ ಮಹನೀಯರು ಹಾಗೂ ದೇಶ ಭಕ್ತರಿದ್ದಾರೆ. ಅವರ ಕೊಡುಗೆಗಳ ಮುಂದೆ ನನ್ನದೊಂದು ಅಳಿಲು ಸೇವೆ ಮಾತ್ರ….ಈ ಹಿನ್ನೆಯಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲವೆಂದು ಭಾವಿಸುತ್ತೇನೆ. ರಾಷ್ಟ್ರ, ನಾಡಿನ ಅಭಿವೃದ್ಧಿಗೆ ಹಾಗೂ ಇತಿಹಾಸಕ್ಕೆ ಕೊಡುಗೆ ನೀಡಿರುವ ಮಹನೀಯರ ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಬಿಎಸ್ ಯಡಿಯೂರಪ್ಪ ಅವರು ಪತ್ರ ಮುಖೇನ ಮನವಿ ಮಾಡಿದ್ದಾರೆ.

ವಿಮಾನ ನಿಲ್ದಾಣ ಕಾಮಗಾರಿಗಳನ್ನು ಬಸವರಾಜ ಬೊಮ್ಮಾಯಿ ಅವರು ಬುಧವಾರ ಪರಿಶೀಲಿಸಿದ ಬಳಿಕ ಮಾತನಾಡಿ, ವಿಮಾನ ನಿಲ್ದಾಣ 386 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಹಲವರ ಹೆಸರು ನಾಮಕರಣ ಮಾಡಲು ಪ್ರಸ್ತಾವ ಬಂದಿದ್ದವು. ನಿಲ್ದಾಣ ನಿರ್ಮಾಣಕ್ಕೆ ಯಡಿಯೂರಪ್ಪ ಅವರು ಶ್ರಮಿಸಿದ್ದಾರೆ. ಹಾಗಾಗಿ, ಅವರ ಹೆಸರು ಅಂತಿಮಗೊಳಿಸಲಾಗಿದೆ. ಸಂಪುಟ ಅನುಮೋದನೆ ನೀಡಿದೆ. ಕೇಂದ್ರದಿಂದಲೂ ಒಪ್ಪಿಗೆ ಸಿಗಲಿದೆ. ರನ್‌ವೇ ಕಾಮಗಾರಿ, ರಾತ್ರಿ ಸಮಯದಲ್ಲೂ ವಿಮಾನ ಇಳಿಯಲು ಸೌಕರ್ಯ ಸೇರಿ ಹಲವು ಕೆಲಸಗಳಿಗೆ ₹60 ಕೋಟಿಯ ಅಗತ್ಯವಿದೆ. ಬಾಕಿ ಹಣ ತಕ್ಷಣ ಬಿಡುಗಡೆ ಮಾಡಲಾಗುವುದು. ಈ ವರ್ಷದ ಅಂತ್ಯದ ಒಳಗೆ ನಿಲ್ದಾಣ ಉದ್ಘಾಟನೆಯಾಗಲಿದೆ ಎಂದು ಹೇಳಿದ್ದರು.

Comments are closed.