ಕರಾವಳಿ

ಕ್ರೀಡಾಕೂಟದಿಂದ ದೇವಾಡಿಗ ಸಮಾಜ ಒಗ್ಗೂಡುತ್ತಿರುವುದು ಉತ್ತಮ ಬೆಳವಣಿಗೆ: ಆರಗ ಜ್ಞಾನೇಂದ್ರ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕ್ರೀಡಾಕೂಟದ ಮೂಲಕ ಸಮುದಾಯ ಒಗ್ಗೂಡುವಿಕೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಸಮಾಜ ಸಂಘಟಿತರಾದಾಗ ಸಾಂಸ್ಕೃತಿಕ ಅಭಿವೃದ್ಧಿ ಸಾಧ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಅವರು ಕುಂದಾಪುರ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ದೇವಾಡಿಗರ ಕ್ರೀಡಾಕೂಟ ಮೈದಾನಕ್ಕೆ ಶನಿವಾರ ಸಂಜೆ ಭೇಟಿ ನೀಡಿ, ದೇವಾಡಿಗರ ಸಮಾಜ ಸೇವಾ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾಜ ಸಂಘಟಿತರಾದಾಗ ನಮಗೆ ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ತೀರ್ಥಹಳ್ಳಿ ಕ್ಷೇತ್ರದಲ್ಲಿ ದೇವಾಡಿಗ ಸಮಾಜ ಸಣ್ಣ ಸಮುದಾಯವಾಗಿದ್ದರೂ, ಅವರು ನನ್ನ ಮೇಲೆ ಅತೀವ ಪ್ರೀತಿ ಹಾಗೂ ಗೌರವ ಹೊಂದಿದ್ದಾರೆ ಎಂದು ಹೇಳಿದರು‌.

ನಾನೇನು ಶ್ರೀಮಂತ ಹಾಗೂ ಪ್ರಭಾವಿ ಕುಟುಂಬ ಹಿನ್ನೆಲೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಬಂದವನಲ್ಲ. ರಾಷ್ಟ್ರೀಯ ಸ್ವಯಂ ಸೇವಕ‌ಸಂಘ ಹಾಗೂ ಸಮಾಜ ಸೇವಾ ಕ್ಷೇತ್ರಕ್ಕೆ ಬಂದಿದ್ದ ನನಗೆ ಬಿಜೆಪಿ ಪಕ್ಷ ಗುರುತಿಸಿ ಸಾಕಷ್ಟು ಅವಕಾಶಗಳನ್ನು ನೀಡಿದೆ. ಇದೀಗ ಗ್ರಹ ಖಾತೆಯ ಜವಾಬ್ದಾರಿಯನ್ನು ನೀಡಿದ್ದು, ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಶಿವಮೊಗ್ಗ ಅರಣ್ಯಇಲಾಖೆಯ ಆಡಳಿತಾಧಿಕಾರಿ ಆಲೂರು ರಘುರಾಮ ದೇವಾಡಿಗ, ಕುಂದಾಪುರ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಬಿಜೆಪಿ ಮಂಡಲದ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಉದ್ಯಮಿಗಳಾದ ರಮೇಶ್ ದೇವಾಡಿಗ ವಂಡ್ಸೆ, ನಾಗರಾಜ ಡಿ. ಪಡುಕೋಣೆ, ಎಂಜಿನಿಯರ್ ಗಣೇಶ್ ದೇವಾಡಿಗ ಇದ್ದರು.

ರವಿ ದೇವಾಡಿಗ ಉಪ್ಪಿನಕುದ್ರು ಸ್ವಾಗತಿಸಿದರು, ರಮೇಶ್ ದೇವಾಡಿಗ ವಂಡ್ಸೆ ವಂದಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ನಿರೂಪಿಸಿದರು.

Comments are closed.