(ವರದಿ- ಯೋಗೀಶ್ ಕುಂಭಾಸಿ)
ಉಡುಪಿ: ಜಿಲ್ಲೆಯ ಬ್ರಹ್ಮಾವರ ಚೇರ್ಕಾಡಿ ಗ್ರಾಮದ ಕನ್ನಾರು ಎಂಬಲ್ಲಿ ವಾಸು ಪೂಜಾರಿ ಎನ್ನುವರ ಮನೆಯಲ್ಲಿ ಅವರ ಪತ್ನಿ ಒಂಟಿಯಾಗಿದ್ದು ಮನೆಯ ಹೊರಗಡೆ ಪಾತ್ರೆ ತೊಳೆಯುವಾಗ ಮನೆ ಹಿಂಬದಿ ಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿ ಮನೆಯನ್ನು ಜಾಲಾಡಿ ಸುಮಾರು 10 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಕಳವು ಮಾಡಿಕೊಂಡು ಹೋಗಿದ್ದ ಆರೋಪಿಯನ್ನು 1 ದಿನದೊಳಗೆ ಬಂಧಿಸಲಾಗಿದೆ.
ಏ.1 ಮಧ್ಯಾಹ್ನದ ವೇಳೆ ಈ ಘಟನೆ ನಡೆದಿತ್ತು. ಕಳವಿನ ಬಗ್ಗೆ ಮಹಿಳೆ ಗಮನಕ್ಕೆ ಬಂದಾಗ ತನ್ನ ಪತಿಗೆ ತಿಳಿಸಿದ್ದು ಬ್ರಹ್ಮಾವರ ಠಾಣೆಯಲ್ಲಿ ಹಗಲು ಕನ್ನ ಕಳವು ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನು ಬಿದ್ದ ಪೊಲೀಸರು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಮಾರ್ಗದರ್ಶನದಂತೆ ಪಿಎಸ್ಐಗಳಾದ ಗುರುನಾಥ ಬಿ ಹಾದಿಮನಿ, ಮುಕ್ತಾಬಾಯಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಯಾವುದೇ ತಾಂತ್ರಿಕ ಸಹಾಯವಿಲ್ಲದೆ ಕೇವಲ ಪೊಲೀಸ್ ಸಾಂಪ್ರದಾಯಿಕ ವಿಧಾನದಲ್ಲಿ ಸಾರ್ವಜನಿಕರಿಂದ ತಳಮಟ್ಟದ ಮಾಹಿತಿ ಸಂಗ್ರಹಿಸಿ ಆರೋಪಿಯು ಕಳವು ಮಾಡಿದ ದಿವಸ ಧರಿಸಿದ ಬಟ್ಟೆಯ ಜಾಡನ್ನು ಹಿಡಿದು ಕೊನೆಗೂ ಆರೋಪಿಯನ್ನು ಪತ್ತೆ ಮಾಡಿ 50,000/- ರೂ ಬೆಲೆಬಾಳುವ ಚಿನ್ನದ ನೆಕ್ಲೇಸ್ ನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಪ್ರಕರಣ ಭೇಧಿಸಿದಂತಾಗಿದೆ.
ಬಂಧಿತ ಆರೋಪಿ 31 ವರ್ಷ ಪ್ರಾಯದ ಸುರೇಶ್ ಅಲಿಯಾಸ್ ಸೂರ್ಯ ಯಾನೆ ಕಪಿ ಎನ್ನುವವನಾಗಿದ್ದು ಬೆಂಗಳೂರು ಯಶವಂತಪುರ ನಿವಾಸಿಯಾದ ಈತ ಮೂಲತಃ ಬ್ರಹ್ಮಾವರ ಪೆಜಮಂಗೂರು ಗ್ರಾಮದವನು. ಈತನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಕಳ್ಳತನದ ಪ್ರಕರಣದ ಆರೋಪಿಯಾಗಿದ್ದು ತಾಮ್ರ, ಚಿನ್ನದ ಕಿವಿಯೋಲೆ, ಉಂಗುರ ಕಳವು ಮಾಡಿದ್ದ. ಆರೋಪಿಯು ಕಾನೂನು ಸಂಘರ್ಷಕ್ಕೊಳಗಾದ ಬಾಲಕನಾಗಿ 7 ವರ್ಷ ರಿಮ್ಯಾಂಡ್ ಹೋಮ್ ನಲ್ಲಿ ಶಿಕ್ಷೆ ಅನುಭವಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದ್ದು ಪ್ರಸ್ತುತ ಆರೋಪಿತನು ಬೆಂಗಳೂರಿನ ಬಿ.ಬಿಎಂ.ಪಿ.ಯಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣಾ ಮೇಲಿನ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಂತೆ ಉಡುಪಿ ಡಿವೈಎಸ್ಪಿ ಸುಧಾಕರ ನಾಯ್ಕ, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಗುರುನಾಥ ಬಿ ಹಾದಿಮನಿ ಹಾಗೂ ತನಿಖೆ ಪಿ.ಎಸ್.ಐ ಮುಕ್ತಾಬಾಯಿ ಹಾಗೂ ಪ್ರೊಬೆಷನರಿ ಪಿ.ಎಸ್.ಐ. ಸುಬ್ರಹ್ಮಣ್ಯ ದೇವಾಡಿಗ ಹಾಗೂ ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ಪ್ರವೀಣ್ ಶೆಟ್ಟಿಗಾರ್, ರಾಘವೇಂದ್ರ ಕಾರ್ಕಡ, ದಿಲೀಪ್ ಕುಮಾರ್, ಅಜ್ಮಲ್ ಮತ್ತು ಚಾಲಕ ಅಣ್ಣಪ್ಪ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು
ಇವರ ಕಾರ್ಯವನ್ನು ಎಸ್ಪಿ ವಿಷ್ಣುವರ್ಧನ್ ಶ್ಲಾಘಿಸಿದ್ದಾರೆ.
Comments are closed.