(ವರದಿ- ಯೋಗೀಶ್ ಕುಂಭಾಸಿ)
ಉಡುಪಿ: ರಾಜ್ಯಾದ್ಯಂತ ಅನ್ಯಮತೀಯರಿಗೆ ಹಿಂದೂ ದೇವಸ್ಥಾನದ ಜಾತ್ರೆಗಳಲ್ಲಿ ಅಂಗಡಿ ಹಾಗೂ ಸ್ಟಾಲ್ ತೆರೆಯಲು ಅವಕಾಶ ನೀಡಬಾರದೆಂಬ ಮನವಿಯ ನಡುವೆಯೇ ಜಿಲ್ಲೆಯ ಕಾಪು ಮಾರಿಗುಡಿ, ಪಡುಬಿದ್ರಿ ಬಳಿಕ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲೂ ಮುಸ್ಲಿಂ ಸಮುದಾಯದವರ ಸಹಿತ ಹಿಂದೂಯೇತರರಿಗೆ ಅಂಗಡಿ ತೆರೆಯಲು ನಿರಾಕರಿಸಿ ಮನವಿ ನೀಡಲಾಗಿತ್ತು. ಇಂದು ನಡೆದ ಜಾತ್ರೆಗೆ ಮುಸ್ಲೀಂ ಸಮುದಾಯದ ವರ್ತಕರು ಬಾರದೇ ಇದ್ದು ಬಂದ ಅಂಗಡಿಗಳ ಮೇಲೆ ಕೇಸರಿ ಧ್ವಜಗಳು ಹಾರಾಡುತ್ತಿವೆ.

ಕೊಲ್ಲೂರು ಜಾತ್ರೆಯಲ್ಲಿ ಅನ್ಯಮತೀಯರಿಗೆ ಯಾವುದೇ ವ್ಯಾಪಾರಕ್ಕೆ ಅವಕಾಶ ನೀಡದಂತೆ ಸ್ಥಳೀಯ ಕೊಲ್ಲೂರು ಗ್ರಾಮ ಪಂಚಾಯತಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಇತ್ತೀಚೆಗೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಮುಸ್ಲೀಂ ಮತ್ತು ಹಿಂದೂಯೇತರ ಸಮುದಾಯದವರು ವ್ಯಾಪಾರಕ್ಕಾಗಿ ಆಗಮಿಸಿಲ್ಲ ಎನ್ನಲಾಗಿದೆ. ಪ್ರತಿವರ್ಷ ಸುಮಾರು 60-80 ಅಂಗಡಿಗಳು ಬರುತ್ತಿದ್ದು ಈ ಬಾರಿ ಆಗಮಿಸಿದ ಅಂಗಡಿಗಳ ಸಂಖ್ಯೆಯೂ ಕಡಿಮೆಯಿದ್ದಂತೆ ಕಂಡುಬಂದಿತು. ಇನ್ನು ಜಾತ್ರೆಗಾಗಿ ಬಂದ ಎಲ್ಲಾ ಅಂಗಡಿ ಹಾಗೂ ಸ್ಟಾಲ್’ಗಳೆದುರು ಕೇಸರಿ ಬಾವುಟ ಕಾಣಿಸುತ್ತಿದೆ. ಜಾತ್ರೆಯಲ್ಲಿ ತೆರೆದಿರುವ ಎಲ್ಲ ಮಳಿಗೆಗಳ ಮೇಲೆಯೂ ಭಗವಾಧ್ವಜ ಅಳವಡಿಸಲಾಗಿದೆ. ಒಂದು ಕಡೆ ಮುಸ್ಲಿಂ ವರ್ತಕರಿಗೆ ಆರ್ಥಿಕ ದಿಗ್ಭಂಧನ ಹಾಕಲಾಗಿದ್ದು, ಮತ್ತೊಂದು ಕಡೆ ಇಡೀ ಜಾತ್ರೆಯನ್ನು ಕೇಸರಿಮಯ ಮಾಡಲಾಗಿದೆ. ಇಂದು ಸಂಜೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕೊಲ್ಲೂರು ಘಟಕದ ವತಿಯಿಂದ ಕೊಲ್ಲೂರು ಬಸ್ ನಿಲ್ದಾಣದಲ್ಲಿ ಹಿಂದೂ ಧರ್ಮಸಭೆ ಕೂಡ ಆಯೋಜನೆ ಮಾಡಲಾಗಿದೆ.
ಸಂಭ್ರಮದ ಜಾತ್ರೆ…
ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಜಾತ್ರಾ ಮಹೋತ್ಸವ ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿ ಅಂಗಡಿ ವಿವಾದದ ನಡುವೆಯೂ ಇಂದು (ಮಾ.25 ಶುಕ್ರವಾರ) ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದಲ್ಲಿ ಜಾತ್ರೆ ಸಂಭ್ರಮದಿಂದ ನಡೆಯುತ್ತಿದೆ. ಶುಕ್ರವಾರದ ದಿನವಾದ್ದರಿಂದ ಮುಂಜಾನೆಯಿಂದಲೇ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಶ್ರೀ ದೇವರ ದರ್ಶನ ಪಡೆಯುತ್ತಿರುವ ದೃಶ್ಯ ಕಂಡುಬಂದಿತ್ತು. ಮಧ್ಯಾಹ್ನದ ಸುಮಾರಿಗೆ ನಡೆಯಲಿರುವ ರಥೋತ್ಸವದಲ್ಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸುವ ನಿರೀಕ್ಷೆಯಿದೆ. ಬೆಳಿಗ್ಗೆನಿಂದ ದೇವಸ್ಥಾನದಲ್ಲಿ ಪೂಜಾಕೈಂಕರ್ಯಗಳು, ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದೆ.
Comments are closed.