ಹುಬ್ಬಳ್ಳಿ: ಭಾರತದಲ್ಲಿ ಮಹಿಳೆಯರು ಹೆಚ್ಚಾಗಿ ಹಿಜಾಬ್ ಧರಿಸದೇ ಇರುವುದರಿಂದಲೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಹಿಜಾಬ್ ವಿವಾದ ಸಂಬಂಧ ರಾಜ್ಯಪಾಲ ಮಹಮದ್ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಮೀರ್, ಮುಸ್ಲಿಮ್ ಸಮುದಾಯದಲ್ಲಿ ಹಿಜಾಬ್ ಅನಿವಾರ್ಯವಲ್ಲ ಎಂಬ ಹೇಳಿಕೆಯನ್ನು ತಿರಸ್ಕರಿಸಿದರು.
‘ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಯೋ ಗೊತ್ತಿಲ್ಲ.ಆದರೆ ಹೆಣ್ಣುಮಕ್ಕಳನ್ನು ಹೊಂದಿರುವವರಿಗೆ ಹಿಜಾಬ್ ನ ಪ್ರಾಮುಖ್ಯತೆ ತಿಳಿದಿರುತ್ತದೆ. ಬಹುಶಃ ಅವರಿಗೆ ಹೆಣ್ಣುಮಕ್ಕಳಿಲ್ಲ ಎಂದೆನಿಸುತ್ತದೆ ಎಂದು ಹೇಳಿದರು.
ಹಿಜಾಬ್ ಎಂದರೆ.. ಪರದೆ… ಅಂದರೆ ಹೆಣ್ಣು ಮಗು ಬೆಳೆದು ದೊಡ್ಡವಳಾದಾಗ ಆಕೆಯ ಅಂದವನ್ನು ಬಚ್ಚಿಡುವ ಪರದೆಯಾಗಿದೆ. ಹೆಣ್ಣಿನ ಅಂದ ಪ್ರದರ್ಶನವಾದರೆ ದುರ್ಬಳಕೆಯಾಗುವ ಸಾಧ್ಯತೆ ಇದೆ. ನೀವು ಅಂಕಿಅಂಶಗಳನ್ನು ನೋಡಿದರೆ ತಿಳಿಯುತ್ತದೆ.. ಭಾರತದಲ್ಲಿ ಅತ್ಯಾಚಾರ ಪ್ರಮಾಣ ಹೆಚ್ಚಿದೆ. ಏಕೆಂದರೆ ಭಾರತದಲ್ಲಿ ಮಹಿಳೆಯರು ಹೆಚ್ಚಾಗಿ ಹಿಜಾಬ್ ಧರಿಸುತ್ತಿಲ್ಲ.
ಅಂತೆಯೇ ಹಿಜಾಬ್ ಏನೂ ಕಡ್ಡಾಯವಲ್ಲ. ಆದರೆ ಯಾರು ಹಿಜಾಬ್ ಧರಿಸಲು ಇಚ್ಚಿಸುತ್ತಾರೆಯೋ ಅವರು ಧರಿಸುತ್ತಾರೆ. ಯಾರು ತಮ್ಮ ಅಂದವನ್ನು ಬೇರೆಯಾರಿಗೂ ತೋರಿಸಬಾರದು ಎಂದು ಭಾವಿಸುತ್ತಾರೆಯೋ ಅವರು ಹಿಜಾಬ್ ಧರಿಸುತ್ತಾರೆ. ಹಿಜಾಬ್ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಬಂದ ಪದ್ಧತಿಯಾಗಿದೆ ಎಂದು ಜಮೀರ್ ಹೇಳಿದ್ದಾರೆ.
Comments are closed.