ಕರ್ನಾಟಕ

ಹಿಜಾಬ್ ವಿವಾದ: ವಿಚಾರಣೆ ಮುಗಿಯುವವರೆಗೆ ಶಾಲೆ-ಕಾಲೇಜುಗಳಲ್ಲಿ ಧಾರ್ಮಿಕ ಗುರುತಿನ ಉಡುಗೆ ಬಳಸುವಂತಿಲ್ಲ- ಹೈಕೋರ್ಟ್ ಮಧ್ಯಂತರ ಆದೇಶ

Pinterest LinkedIn Tumblr

ಬೆಂಗಳೂರು: ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಇಂದು ಕೈಗೆತ್ತಿಕೊಂಡಿದೆ. ಏಕಸದಸ್ಯ ಪೀಠದಿಂದ ವಿಸ್ತ್ರತ ಪೀಠಕ್ಕೆ ವರ್ಗಾವಣೆಯಾದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಸೋಮವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.

ಶಿಕ್ಷಣ ಸಂಸ್ಥೆಗಳು ತಕ್ಷಣ ಕಾರ್ಯಾರಂಭ ಮಾಡಲಿ. ಅರ್ಜಿಗಳ ವಿಚಾರಣೆ ಮುಗಿಯುವವರೆಗೆ ಯಾರೊಬ್ಬರೂ ಯಾವುದೇ ಧಾರ್ಮಿಕ ಗುರುತಿನ ಉಡುಗೆಗೆ (ಹಿಜಾಬು ಮತ್ತು ಶಾಲು) ಬಳಸುವಂತಿಲ್ಲ ಎಂದು ಸೂಚಿಸಿದ ಹೈಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

3 ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾ.ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಜೈಬುನ್ನಿಸಾ ಎಂ.ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು (ಫೆ.10) ಮಧ್ಯಾಹ್ನ 2.30ಕ್ಕೆ ಆರಂಭಿಸಿದೆ.

ಅರ್ಜಿದಾರರ ಪರ ವಕೀಲರಾದ ಸಂಜಯ ಹೆಗ್ಡೆ, ದೇವದತ್ ಕಾಮತ್ ವಾದ ಆರಂಭಿಸಿದರು. ಪ್ರಾರಂಭದಲ್ಲಿ ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ಅವರು ಪ್ರಕರಣದ ಹಿನ್ನೆಲೆಯನ್ನು ವಿವರಿಸುವಂತೆ ಸೂಚಿಸಿದರು. ಅರ್ಜಿದಾರರ ಪರ ವಕೀಲ ಸಂಜಯ್ ಹೆಗ್ಡೆ ಅವರು ಘಟನೆಯನ್ನು ಕೋರ್ಟ್ ಗೆ ವಿವರಿಸಿದರು.

2021 ಡಿಸೆಂಬರ್ ನಿಂದಲೇ ಅರ್ಜಿದಾರ ವಿದ್ಯಾರ್ಥಿನಿಯರೊಂದಿಗೆ ತಾರತಮ್ಯ ಮಾಡಲಾಗುತ್ತಿದೆ. ಶಿರವಸ್ತ್ರ ತಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆ ಆಗಿದೆ ಎಂದು ವಿದ್ಯಾರ್ಥಿಗಳ ವಾದವಾಗಿದೆ ಎಂದರು.

ಸ್ಕಾರ್ಫ್ ಧರಿಸುವುದು ಮೂಲಭೂತ ಹಕ್ಕುಗಳೊಳಗೆ ಬರುತ್ತದೆಯೇ ಎಂಬ ವಿಷಯವನ್ನು ನಾವು ಪರಿಗಣಿಸುತ್ತಿದ್ದೇವೆ. ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆಯ ಅತ್ಯಗತ್ಯ ಭಾಗವೇ ಎಂಬುದನ್ನು ಸಹ ನಾವು ಪರಿಗಣಿಸುತ್ತಿದ್ದೇವೆ ಎಂದು ಕೋರ್ಟ್ ಹೇಳಿತು.

ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರದ ಬಗ್ಗೆ ಯಾವುದೇ ವಿಶೇಷ ನಿಬಂಧನೆಗಳಿಲ್ಲ. ಏಕರೂಪದ ಸಂಹಿತೆಯ ಉಲ್ಲಂಘನೆಗಾಗಿ ದಂಡ ವಿಧಿಸಲು ಯಾವುದೇ ಅವಕಾಶವಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ನಿರ್ವಹಣೆಗೆ ದಂಡಗಳು ಹೆಚ್ಚಾಗಿವೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಸಂಜಯ್ ಹೆಗ್ಡೆ ಹೇಳಿದರು.

Comments are closed.