ಕರಾವಳಿ

ಗಂಗೊಳ್ಳಿ, ಬೈಂದೂರಿನ ಕೆಲ ಕಾಲೇಜಿನಲ್ಲೂ ಹಿಜಾಬ್, ಕೇಸರಿ ಶಾಲು ವಿವಾದ: ನಾವುಂದ ಕಾಲೇಜಿನಲ್ಲಿ ಪೋಷಕರ ಸಭೆ

Pinterest LinkedIn Tumblr

ಕುಂದಾಪುರ: ರಾಜ್ಯ ಸರಕಾರ ಸಮವಸ್ತ್ರ ಕಡ್ಡಾಯ ಮಾಡಿ ಸುತ್ತೋಲೆ ಹೊರಡಿಸಿದ್ದರೂ ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಕೆಲವು ಸರಕಾರಿ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಫೆ.7 ಸೋಮವಾರವೂ ಗೊಂದಲ ಹಾಗೂ ಗದ್ದಲ ಮುಂದುವರಿದಿದೆ.

ಬೈಂದೂರು, ಉಪ್ಪುಂದ, ನಾವುಂದ ಕಾಲೇಜ್…
ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದು ಸರಕಾರದ ಆದೇಶದಂತೆ ಅವರನ್ನು ತರಗತಿ ಕಳಸಿಲ್ಲ. ಬದಲಾಗಿ ಪ್ರತ್ಯೇಕ ಕೊಠಡಿ ನೀಡಲಾಗಿದ್ದು ಮನೆಗೆ ವಿದ್ಯಾರ್ಥಿನಿಯರು ತೆರಳಿದರು. ಉಪ್ಪುಂದ ಜೂನಿಯರ್ ಕಾಲೇಜಿನಲ್ಲಿ ಸೋಮವಾರ ಯಾವುದೇ ಹಿಜಾಬ್ ಮತ್ತು ಕೇಸರಿ ಶಾಲಿಗೆ ಸಂಬಂಧಿಸಿದ ಸಂಘರ್ಷ ಇರಲಿಲ್ಲ. ‌ಉಪ್ಪುಂದ ಸರಕಾರಿ ಪ್ರೌಢ ಶಾಲೆಯಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಬಂದಿದ್ದು ಇದಕ್ಕೆ ಪ್ರತಿಯಾಗಿ ಕೆಲವರು ಕೇಸರಿ ಶಾಲು‌ ಕೂಡ ಧರಿಸಿದರು. ಪರೀಕ್ಷೆ ಹಿನ್ನೆಲೆ ಇವರೆಲ್ಲರಿಗೂ ತರಗತಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು. ಆದರೆ ಮಂಗಳವಾರದಿಂದ ಸರಕಾರದ ನಿರ್ದೇಶನದಂತೆ ಏಕರೂಪ ಸಮವಸ್ತ್ರ‌ನೀತಿ ಇರಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಇನ್ನು ನಾವುಂದ ಕಾಲೇಜಿನಲ್ಲಿ ಪೋಷಕರ ಸಭೆ ನಡೆಯಿತು. ಬಿರುಸಿನ ಚರ್ಚೆ ಬಳಿಕ ಹಿಜಾಬ್ ಧರಿಸಿ ಬರಲು ಅವಕಾಶ ಇಲ್ಲವಾದರೆ ಮಕ್ಕಳನ್ನು ಕಾಲೇಜಿಗೆ ಕಳಿಸೋದಿಲ್ಲ ಎಂದು ಪೋಷಕರು ಸಭೆಯಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಗಂಗೊಳ್ಳಿಯಲ್ಲಿಯೂ ಗೊಂದಲ..
ಗಂಗೊಳ್ಳಿಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಮತ್ತೆ ಭುಗಿಲೆದ್ದಿದ್ದು, ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಿಸಲು ನಿರಾಕರಿಸಿದ ಘಟನೆ ಸೋಮವಾರ ನಡೆದಿದೆ.

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಿಜಾಬ್ ವಿವಾದದ ಕುರಿತಂತೆ ಕೈಗೊಂಡ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿರುವುದು ಮತ್ತೆ ವಿವಾದಕ್ಕೆ ಕಾರಣವಾಯಿತು. ಇದರಿಂದ ಕಾಲೇಜಿನಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಂಡಿರುವುದನ್ನು ವಿರೋಧಿಸಿ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಲು ಮುಂದಾದರು. ಇದೇ ಸಂದರ್ಭ ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಂಡಿದ್ದ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ಬರುವಂತೆ ಕಾಲೇಜಿನ ಪ್ರಾಂಶುಪಾಲರು ಖಡಕ್ ಸೂಚನೆ ನೀಡಿದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದರು. ಸರಕಾರದ ಆದೇಶವನ್ನು ಮೀರಿ ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಬಂದರೆ ತರಗತಿಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸರಕಾರದ ಆದೇಶ ಪಾಲಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲರು ಸೂಚನೆ ನೀಡಿದರು. ಪ್ರಾಂಶುಪಾಲರ ಸೂಚನೆಯಂತೆ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದು ತರಗತಿಗೆ ಹಾಜರಾದರು. ವಿದ್ಯಾರ್ಥಿನಿಯರ ಪೋಷಕರ ಜೊತೆ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ್ ಕೂಡ ಸರಕಾರದ ಆದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದರು. ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಹಾಗೂ ಅನ್ಯಕೋಮಿನ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ನೀತಿಯನ್ನು ಪಾಲಿಸಬೇಕು. ಇಲ್ಲದಿದ್ದರೆ ತರಗತಿ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಕಾಲೇಜಿನಿಂದ ನೋಟಿಸ್ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕಾಲೇಜಿನಲ್ಲಿ ಯಾವುದೇ ಧರ್ಮದ ಪರ ಸಮವಸ್ತ್ರ ಧರಿಸಲು ಅವಕಾಶವಿಲ್ಲ. ಸರಕಾರದ ಆದೇಶದಂತೆ ಕಾಲೇಜಿನ ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗುವುದು. ಸಮವಸ್ತ್ರಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಆದೇಶ ಬಂದ ಮೇಲೆ ಸರಕಾರದ ಆದೇಶದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು. ಅಲ್ಲಿಯವರೆಗೆ ವಿದ್ಯಾರ್ಥಿಗಳು ಸರಕಾರದ ಮತ್ತು ಶಾಲಾ ಆಡಳಿತ ಮಂಡಳಿಯ ಆದೇಶವನ್ನು ಉಲ್ಲಂಘಿಸದೆ ಯಥಾಸ್ಥಿತಿ ಕಾಪಾಡಬೇಕೆಂದು ಎಂದು ಶಾಲೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತಿಳುವಳಿಕೆ ನೀಡಿದ್ದಾರೆ.

 

Comments are closed.