ಕುಂದಾಪುರ: ವಿದ್ಯಾಸಂಸ್ಥೆಯಲ್ಲಿ ಯಾವುದೇ ಧರ್ಮದ ವಿಚಾರ ಅಗತ್ಯವಿಲ್ಲ. ಯಾವುದೇ ಧರ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯಬಾರದು. ಹಾಗಾಗಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬಂದರೆ ತರಗತಿ ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ಶಾಲಾಭಿವೃದ್ಧಿ ಸಮಿತಿಯ ಮೋಹನದಾಸ್ ಶೆಣೈ ಹೇಳಿಕೆ ನೀಡಿದ್ದಾರೆ.
ಕುಂದಾಪುರ ಜೂನಿಯರ್ ಕಾಲೇಜಿನಲ್ಲಿ ಶನಿವಾರ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಆದೇಶದಂತೆ ನಡೆದ ಸಭೆ ಇದಾಗಿತ್ತು.ಸಂವಿಧಾನ ಹಾಗೂ ರಾಜ್ಯ ಸರಕಾರದ ಆದೇಶದಂತೆ ಇಲ್ಲಿ ಮುಂದೆಯೂ ನಡೆಯುತ್ತದೆ. ಕೇಸರಿ ಶಾಲು ಧರಿಸಿ ಬಂದರೂ ಹಿಜಾಬ್ ಧರಿಸಿ ಬಂದರೂ ತರಗತಿ ಪ್ರವೇಶವಿಲ್ಲ. ಗೇಟ್ ಬಳಿ ಕೂರುತ್ತಿದ್ದ ವಿದ್ಯಾರ್ಥಿನಿಯರಿಗೆ ಶಾಲಾ ಆವರಣದೊಳಕ್ಕೆ ವ್ಯವಸ್ಥೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಹಿಜಾಬ್ ಧರಿಸಿದವರಿಗೆ ಯಾವುದಾದರೂ ಕೊಠಡಿ ನೀಡಲು ತೀರ್ಮಾನ ಮಾಡಲಾಗಿದ್ದು ಹಿಜಾಬ್ ಮತ್ತು ಕೇಸರಿ ಧರಿಸಿದವರಿಗೂ ಇದು ಅನ್ವಯಯವಾಗಲಿದೆ. ಹಾಗೆಯೇ ಶಾಲಾ ವಠಾರದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಪ್ರವೇಶಕ್ಕೂ ನಿರ್ಬಂಧಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಜೂನಿಯರ್ ಕಾಲೇಜು) ಕಳೆದ ಮೂರು ದಿನಗಳಿಂದ ಹಿಜಾಬ್ ಹಾಗೂ ಕೇಸರಿ ವಿವಾದ ಸೃಷ್ಟಿಯಾಗಿತ್ತು. ಗೇಟ್ ಬಳಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ನಿಲ್ಲಿಸಿದ್ದು ರಾಷ್ಟ್ರ ಮಟ್ಟದ ಸುದ್ದಿಯಾಗಿತ್ತು. ಶನಿವಾರ ಕಾಲೇಜಿಗೆ ರಜೆ ಕೂಡ ನೀಡಲಾಗಿತ್ತು.
Comments are closed.