ಕರ್ನಾಟಕ

ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಇನ್ನಿಲ್ಲ

Pinterest LinkedIn Tumblr

ಬಾಗಲಕೋಟೆ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ (76) ಹೃದಯಾಘಾತದಿಂದ ಇಂದು(ಶನಿವಾರ) ನಿಧನರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಪಟ್ಟಣದಲ್ಲಿ ಇಂದು ಬೆಳಗ್ಗೆ 6:30ಕ್ಕೆ ಇಬ್ರಾಹಿಂ ಸುತಾರ್ ಮೃತಪಟ್ಟಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಇಬ್ರಾಹಿಂ ಸುತಾರ್ ಹೃದಯದ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಿಗ್ಗೆ ಮತ್ತೆ ಲಘು ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಇಬ್ರಾಹಿಂ ಸುತಾರ್ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಬ್ರಾಹಿಂ ಸುತಾರ್ ಕೊನೆಯುಸಿರೆಳೆದಿದ್ದಾರೆ. ಸುತಾರ್ ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇಬ್ರಾಹಿಂ ಸುತಾರ್ ಅವರು ನಾಡಿನೆಲ್ಲೆಡೆ ಪ್ರವಚನ ನೀಡಿ ಭಾವೈಕ್ಯತೆ ಸಂದೇಶ ಸಾರಿ ಹೆಸರು ವಾಸಿಯಾಗಿದ್ದರು. ಹಿಂದೂ ಮುಸ್ಲಿಂ ಭಾವೈಕ್ಯತೆ ಶ್ರೇಷ್ಠ ಪ್ರವಚಕ, ಸೂಫಿ ಸಂತರಾಗಿದ್ದ ಸುತಾರ್‌ಗೆ ಪದ್ಮಶ್ರೀ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಗಣ್ಯರ ಸಂತಾಪ
ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಸಿಎಂ ಬೊಮ್ಮಾಯಿ, ಸರ್ವಧರ್ಮ ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಅವರು ಇಂದು ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ‌ ಎಂದಿದ್ದಾರೆ.

Comments are closed.