ಕುಂದಾಪುರ: ಪರಿಚಯದ ವಿದ್ಯಾರ್ಥಿನಿಯೋರ್ವಳ ಜೊತೆ ಮಾತನಾಡಿದ್ದಕ್ಕೆ ಯುವಕನೋರ್ವನಿಗೆ ಅನ್ಯಕೋಮಿನ ನಾಲ್ವರು ಯುವಕರು ಬಸ್ಸಿನಲ್ಲೇ ಹಿಗ್ಗಾಮುಗ್ಗ ಥಳಿಸಿದ ಘಟನೆ ಫೆ.3 ಗುರುವಾರ ಹಾಲಾಡಿ ಸಮೀಪದ ಕಾಸಾಡಿ ಎಂಬಲ್ಲಿ ನಡೆದಿದೆ.
ಬಿದ್ಕಲಕಟ್ಟೆ ಐಟಿಐ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಶಶಾಂಕ್ ಹಲ್ಲೆಗೊಳಗಾದ ಯುವಕ.

ಬೆಳಿಂಜೆ ನಿವಾಸಿ ಶಶಾಂಕ್ ಅವರು ಸ್ನೇಹಿತರಾದ ಪ್ರಜ್ವಲ್, ಗಣೇಶ್ ಜೊತೆ ಬಸ್ಸಿನಲ್ಲಿ ತೆರಳುತ್ತಿರುವಾಗ ನಾಲ್ವರ ತಂಡ ಏಕಾಏಕಿ ಗಲಾಟೆಗಿಳಿದಿದೆ. ಯುವತಿ ಜೊತೆ ಮಾತನಾಡಿದ್ದನ್ನು ಪ್ರಶ್ನಿಸಿ ಶಶಾಂಕ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆ ಮಾಡಿದವರ ಪೈಕಿ ಮೂವರು ಬಸ್ಸಿನಿಂದ ಇಳಿದುಹೋಗಿದ್ದು ಓರ್ವ ಮಾತ್ರ ಕುಂದಾಪುರದವರೆಗೆ ಬಸ್ಸಿನಲ್ಲೇ ಬಂದಿದ್ದಾನೆ ಎನ್ನಲಾಗಿದೆ. ಗಾಯಾಳು ಯುವಕನಿಗೆ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಯುವಕನ ಮೇಲಿನ ಹಲ್ಲೆ ಪ್ರಕರಣದ ತರುವಾಯ ಕುಂದಾಪುರ ಶಾಸ್ತ್ರೀ ವೃತ್ತದ ಬಳಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದರು. ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. , ಸಿಪಿಐ ಗೋಪಿಕೃಷ್ಣ, ಪಿಎಸ್ಐ ಸದಾಶಿವ ಗವರೋಜಿ ಮೊದಲಾದವರು ಭೇಟಿ ನೀಡಿದ್ದರು.
Comments are closed.