ಕರಾವಳಿ

ರಸ್ತೆಯ ಸಿಮೆಂಟ್ ಸ್ಲಾಬ್ ಕುಸಿತ; ಸೌಕೂರು ಏತ ನೀರಾವರಿ ಕಾಮಗಾರಿ ಸಂಬಂದಪಟ್ಟವರ ವಿರುದ್ಧ ಜನಾಕ್ರೋಷ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಸೌಕೂರು ಏತನೀರಾವರಿ ಕಾಮಗಾರಿ ವೇಳೆ ರಸ್ತೆಗಳ ನಡುವೆ ಹಾಕಿದ ಸ್ಲಾಬ್ ಕುಸಿದಿದ್ದು ಮಿನಿ ಟಿಪ್ಪರ್ ಹಾನಿಗೊಳಗಾದ ಘಟನೆ ಜ.28 ಶುಕ್ರವಾರ ಗುಲ್ವಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಸೌಕೂರು ಸಮೀಪದ ಬೋಳ್ಕಟ್ಟೆ ದುರ್ಗಾನಗರ ಎಂಬಲ್ಲಿ ನಡೆದಿದೆ.

ಸೌಕೂರು, ಗುಲ್ವಾಡಿ, ಕಂಡ್ಲೂರು, ಮಾವಿನ ಕಟ್ಟೆ, ನೇರಳಕಟ್ಟೆ ಸಂಪರ್ಕಿಸಲು ಸುಲಭ ಮಾರ್ಗವಾದ ದುರ್ಗಾನಗರ ಬಳಿಯಿಂದ ಸಾಗುವ ರಸ್ತೆ ಬಳಿ ಕಾಮಗಾರಿ ಹಿನ್ನೆಲೆ ಸ್ಲಾಬ್ ಮಾದರಿಯಲ್ಲಿ ಸಿಮೆಂಟ್ ತೇಪೆ ಹಾಕಲಾಗಿತ್ತು. ಆದರೆ ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆ ಸುಮಾರು 30 ಮೀಟರ್ ದೂರ ಕುಸಿದಿದ್ದು ಸಂಚಾರ ದುಸ್ತರವಾಗಿದೆ. ಶುಕ್ರವಾರ ಬೆಳಿಗ್ಗೆ ಜಡ್ಕಲ್’ನಿಂದ ಬಸ್ರೂರಿಗೆ ಕಟ್ಟಡ ನಿರ್ಮಾಣ ಸಾಮಾಗ್ರಿ ಸಾಗಿಸುತ್ತಿದ್ದ ಮನೋಜ್ ಎನ್ನುವವರಿಗೆ ಸೇರಿದ ಮಿನಿ ಟಿಪ್ಪರ್ ವಾಹನ ಕುಸಿತದಿಂದ ಹಾನಿಗೊಳಗಾಗಿದೆ. ಟಿಪ್ಪರ್ ಬ್ಲೇಡ್, ಜಾಯಿಂಟ್ ಸಹಿತ ಹಿಂಭಾಗ ಹಾನಿಯಾಗಿದ್ದು ಸುಮಾರು 20 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ. ನೀರು ಪೈಲ್ ಲೈನ್ ಕಾಮಗಾರಿ ವೇಳೆ ಪೈಪ್ ಅಳವಡಿಸಿ ಡಾಮರು ರಸ್ತೆ ಹಾಗೂ ಕಾಂಕ್ರಿಟ್ ರಸ್ತೆಗೆ ಸಂಪರ್ಕಿಸುವ ಭಾಗಕ್ಕೆ ಸಿಮೆಂಟ್ ತೇಪೆ ಹಾಕಿದ್ದು ಸಂಪೂರ್ಣ ಅವೈಜ್ಞಾನಿಕವಾಗಿ ಈ ಘಟನೆ ಸಂಭವಿಸಿದೆ‌. ಈ ಬಗ್ಗೆ ಸ್ಥಳೀಯರು ಹಾಗೂ ವಾಹನ ಸವಾರರು ತೀವೃ ಆಕ್ರೋಷ ವ್ಯಕ್ತಪಡಿಸಿದರು.

ಕಳೆದ ನಾಲ್ಕು ತಿಂಗಳ ಹಿಂದೆ ಜೀವನೋಪಾಯಕ್ಕಾಗಿ ಟಿಪ್ಪರ್ ವಾಹನ ಖರೀದಿಸಿದ್ದು ಕೊರೋನಾ ಹಿನ್ನೆಲೆ ಸರಿಯಾದ ಬಾಡಿಗೆಯೂ ಸಿಗುತ್ತಿಲ್ಲ. ಇದೀಗಾ ಯಾರದ್ದೋ ಬೇಜವಬ್ದಾರಿಯಿಂದ ಟಿಪ್ಪರ್ ಹಾನಿಯಾಗಿದೆ. ಸಂಬಂದಪಟ್ಟವರು ಅವ್ಯವಸ್ಥಿತ ರಸ್ತೆ ಸರಿಪಡಿಸಬೇಕು ಹಾಗೂ ಟಿಪ್ಪರ್ ಹಾನಿಯ ನಷ್ಟ ತುಂಬಿಕೊಡಬೇಕು ಎಂದು ಟಿಪ್ಪರ್ ಮಾಲಕ ಮನೋಜ್ ಹೇಳಿದ್ದಾರೆ.

ಗುಲ್ವಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಸುದೇಶ್ ಕುಮಾರ್ ಶೆಟ್ಟಿ, ಸದಸ್ಯ ಚಂದ್ರ ಪೂಜಾರಿ, ಗುಲ್ವಾಡಿ ಗ್ರಾಮಸ್ಥರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಸೌಕೂರು, ಐ.ಕೆ ಇಬ್ರಾಹಿಂ, ಸಂಪತ್, ದರ್ಶನ್ ಆಚಾರ್, ಸುಬ್ರಮಣ್ಯ ಆಚಾರ್, ರಾಜು ಪೂಜಾರಿ ಮೊದಲಾದವರು ಭೇಟಿ ನೀಡಿದ್ದಾರೆ.

 

Comments are closed.