ಕರ್ನಾಟಕ

ತುಮಕೂರಿನಲ್ಲಿ ಆರೋಪಿ ಬಂಧನಕ್ಕಾಗಿ ದೂರುದಾರನಿಂದ ಬಾಡಿಗೆ ಕಾರು ಕೇಳಿದ ಸಿಪಿಐ ಸಸ್ಪೆಂಡ್‌

Pinterest LinkedIn Tumblr

ತುಮಕೂರು: ಆರೋಪಿ ಬಂಧನಕ್ಕೆ ದೂರುದಾರನಿಗೆ ಬಾಡಿಗೆ ಕಾರು ತರಲು ಪೊಲೀಸರು ಪೀಡಿಸಿದ್ದಕ್ಕೆ ಸ್ವತಃ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಾಪುರವಾಡ್‌ ತಮ್ಮ ಕಾರನ್ನೇ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುರುವೇಕೆರೆ ಸಿಪಿಐ ನವೀನ್‌ ಅವರನ್ನು ಅಮಾನತುಗೊಳಿಸಿ ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್‌ ಅವರು ಆದೇಶ ಹೊರಡಿಸಿದ್ದಾರೆ.

ತುರುವೇಕೆರೆ ತಾಲೂಕಿನ ಕೋಡಿಹಳ್ಳಿಯ ನಾಗೇಂದ್ರಪ್ಪ ಎಂಬುವರ ಮೇಲೆ ಚಂದನ್‌ ಮತ್ತು ಶಿವಕುಮಾರ್‌ ಎಂಬಿಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಕುರಿತು ನಾಗೇಂದ್ರ ದಂಡಿನಶಿವರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿದ್ದರೂ ಆರೋಪಿಗಳ ಬಂಧನ ಆಗಿರಲಿಲ್ಲ. ನಾಗೇಂದ್ರಪ್ಪ ಅವರು ಶೀಘ್ರ ಆರೋಪಿ ಬಂಧನಕ್ಕೆ ಮನವಿ ಮಾಡಿದ್ದರು.

ಆ ವೇಳೆ ದಂಡಿನಶಿವರ ಪೊಲೀಸರು ಆರೋಪಿ ಬಂಧನಕ್ಕೆ ಬಾಡಿಗೆ ಕಾರು ತರುವಂತೆ ದೂರುದಾರನಿಗೆ ಹೇಳಿದ್ದರು. ಪೊಲೀಸರ ಈ ವರ್ತನೆಯಿಂದ ಬೇಸತ್ತ ದೂರುದಾರ ನಾಗೇಂದ್ರಪ್ಪ ಎಸ್‌ಪಿ ರಾಹುಲ್‌ ಕುಮಾರ್‌ಶಹಾಪುರವಾಡ್‌ ಅವರಿಗೆ ದೂರು ನೀಡಿದ್ದರು. ಕೂಡಲೇ ಸ್ಪಂದಿಸಿದ ಎಸ್‌ಪಿ ತಮ್ಮ ಕಾರಿನಲ್ಲಿ ದೂರುದಾರನನ್ನು ತುರುವೇಕೆರೆ ಸಿಪಿಐ ಕಚೇರಿಗೆ ಕಳುಹಿಸಿದ್ದರು. ನಂತರ ಪೊಲೀಸರು ಕೆಲವೇ ಗಂಟೆಗಳಲ್ಲಿಆರೋಪಿಯನ್ನು ಬಂಧಿಸಿದ್ದರು. ಎಸ್‌ಪಿ ಕಾರ್ಯಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದರು. ಇದೀಗ ಕರ್ತವ್ಯಲೋಪ ಹಿನ್ನೆಲೆ ತುರುವೇಕೆರೆ ಸಿಪಿಐ ನವೀನ್‌ ಅಮಾನತುಗೊಂಡಿದ್ದಾರೆ.

Comments are closed.