ಕರಾವಳಿ

ಕೊರಗರ ಮೇಲಿನ ಕೇಸ್ ವಾಪಾಸ್ ವಿಚಾರ; ಸುಳ್ಳಾದ ಗೃಹಸಚಿವರ ಭರವಸೆ; ಉಪವಾಸ ಸತ್ಯಾಗ್ರಹದ ‌ಎಚ್ಚರಿಕೆ

Pinterest LinkedIn Tumblr

ಉಡುಪಿ: ಕಳೆದ ತಿಂಗಳು ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮದ ಬಾರಿಕೆರೆ ಕೊರಗ ಕಾಲನಿಯಲ್ಲಿ ಕೊರಗರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ವರ ಸೇರಿದಂತೆ ಏಳು ಮಂದಿ ವಿರುದ್ಧ ದಾಖಲಾಗಿರುವ ಕೇಸುಗಳನ್ನು 15 ದಿನಗಳೊಳಗೆ ವಾಪಸ್ ಪಡೆಯದಿದ್ದರೆ ಪಾದಯಾತ್ರೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ಕೊರಗ ಸಂಘಟನೆಗಳು ನಿರ್ಧರಿಸಿವೆ.

ಉಡುಪಿ ಜಿಲ್ಲಾ ಕೊರಗ ಸಂಘಟನೆಗಳ ನೇತೃತ್ವದಲ್ಲಿ ಕೋಟದಲ್ಲಿ ಭಾನುವಾರ ನಡೆದ ಕೊರಗ ಮುಖಂಡರ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಡಿ.27ರಂದು ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಕೋಟ ಪೊಲೀಸರು ಕೊರಗರ ಮೇಲೆ ಲಾಠಿ ಚಾರ್ಜ್ ನಡೆಸಿ, ದೌರ್ಜನ್ಯ ಎಸಗಿದ್ದರಲ್ಲದೆ ಅಮಾಯಕರ ಕೊರಗರ ಮೇಲೆಯೇ ಸುಳ್ಳು ಕೇಸುಗಳನ್ನು ದಾಖಲಿಸಿದ್ದರು.ಈ ಬಗ್ಗೆ ಜ.1ರಂದು ಕಾಲನಿಗೆ ಭೇಟಿ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪೊಲೀಸರು ದಾಖಲಿಸಿರುವ ಪ್ರಕರಣ ಸುಳ್ಳು ಎಂಬುದಾಗಿ ಸಾರ್ವಜನಿಕವಾಗಿ ಹೇಳಿದ್ದರು. ಅದನ್ನು ಹಿಂಪಡೆಯುವುದಾಗಿ ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಘಟನೆಯ ಬಳಿಕ ಕಾಲನಿಗೆ ಭೇಟಿ ನೀಡಿದ ಗೃಹ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರು ಕೊರಗರ ಮೇಲಿನ ಕೇಸು ವಾಪಸು ಪಡೆಯುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ಇನ್ನೂ ಈಡೇರಿಲ್ಲ. ಆ ಬಗ್ಗೆ ಯಾವುದೇ ಪ್ರಕ್ರಿಯೆಗಳು ಕೂಡ ನಡೆದಿಲ್ಲ. ಈ ನಿಟ್ಟಿನಲ್ಲಿ ಕೇಸ್ ವಾಪಸ್ ಪಡೆಯಲು ಮತ್ತೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ಈ ಅವಧಿಯೊಳಗೆ ಕೇಸ್ ವಾಪಸು ಪಡೆಯದಿದ್ದರೆ ಕೋಟದಿಂದ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ, ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಸಭೆಯಲ್ಲಿ ಮುಖಂಡರು ಎಚ್ಚರಿಕೆ ನೀಡಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ನಮಗೆ ನ್ಯಾಯ ದೊರೆಯದಿದ್ದಲ್ಲಿ ಕೊರಗ ಸಮುದಾಯದವರು ನಂಬಿದ ಕುಲ ದೈವ ಕೊರಗಜ್ಜನ ತಾಯಿ ಬೈಕಾಡ್ತಿ ಅಪ್ಪೆಗೆ ನಮ್ಮ ತಾಯಂದಿರು ಹಾಗೂ ಅಜ್ಜಿಯಂದಿರು ಸೇರಿ ಭೂಮಿಗೆ ಕಣ್ಣೀರು ಇಳಿಸಿ ದೂರು ನೀಡಲಾಗುವುದು ಎಂದು ಕೊರಗ ಮುಖಂಡ ಬಾಲರಾಜ್ ಮಂಗಳೂರು ತಿಳಿಸಿದರು.

ಈ ಸರಕಾರದಲ್ಲಿ ಗೃಹ ಸಚಿವರ ಮಾತಿಗೆ ಬೆಲೆ ಇಲ್ಲವೇ ಅಥವಾ ಗೃಹ ಸಚಿವರು ನಮ್ಮ ಎದುರು ನಮ್ಮ ಮೇಲೆ ದಾಖಲಾಗಿರುವ ಪ್ರಕರಣವನ್ನು 10 ದಿನಗಳೊಳಗೆ ಹಿಂದೆಪಡೆಯುತ್ತೇವೆ ಎಂದು ಸುಳ್ಳು ಹೇಳಿದ್ದಾರೆಯೇ? ಗೃಹ ಸಚಿವರು ಮತ್ತು ಸಮಾಜ ಕಲ್ಯಾಣ ಸಚಿವರ ಮಾತು ಕೇಳಿ ನಾವು ಹೋರಾಟ ಮಾಡದೆ ಇರುವುದು ತಪ್ಪೇ ಎಂದು ಸಭೆಯಲ್ಲಿ ಕೊರಗ ಮುಖಂಡರು ಪ್ರಶ್ನಿಸಿದ್ದಾರೆ.

ಅದೇ ರೀತಿ ಸಚಿವರು ಇದೇ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕೊರಗರ ಕಾಲನಿಗೆ ಮೂಲಭೂತ ಸೌಕರ್ಯವನ್ನು ಕೂಡಲೇ ಒದಗಿಸಬೇಕು ಮತ್ತು ಕೊರಗರ ಭೂಮಿಯ ಹಕ್ಕುಪತ್ರವನ್ನು ತಕ್ಷಣವೇ ಸರಿ ಮಾಡಿಕೊಡಬೇಕು ಎಂದು ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.

ಸಭೆಯಲ್ಲಿ ಕೊರಗ ಸಂಘಟನೆಗಳ ಮುಖಂಡರಾದ ವಿ.ಗಣೇಶ್ ಕುಂದಾಪುರ, ಸಂಜೀವ ಕೊಡಿಕಲ್, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಪುತ್ರನ್, ಕೋಟತಟ್ಟು ಗ್ರಾಪಂ ಸದಸ್ಯೆ ಸೀತಾ, ಪ್ರಮುಖರಾದ ರಾಜೇಶ್ ಕೋಟ, ಸುದರ್ಶನ್ ಕೋಟ, ಲಕ್ಷ್ಮಣ್ ಬೈಂದೂರು, ನಾಗರಾಜ್ ಮಂಗಳೂರು, ಗಣೇಶ್ ಬಾರ್ಕೂರು, ಶಿಲ್ಪಾ ಮತ್ತಿತರರು ಉಪಸ್ಥಿತರಿದ್ದರು.

 

Comments are closed.