ಉಡುಪಿ: ಉಡುಪಿಯ ಶ್ರೀಕೃಷ್ಣಮಠದಲ್ಲಿ ಸೋಮವಾರ ರಾತ್ರಿ, ಮಂಗಳವಾರ ಬೆಳಗ್ಗೆ ನಡೆಯುವ ಪರ್ಯಾಯ ಪೀಠಾರೋಹಣ ಕಾರ್ಯಕ್ರಮವನ್ನು ಕೊರೊನಾ ಹಿನ್ನೆಲೆ ಸರಳ ರೀತಿಯಲ್ಲಿ ಆಚರಿಸಲು ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಆಶಯದಂತೆ ಉತ್ಸವ ಸಮಿತಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಮೆರವಣಿಗೆಗೆ ಆಹ್ವಾನಿಸಲಾದ ಸುಮಾರು 40 ಜನಪದ ಕಲಾವಿದರ ತಂಡಗಳ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಸಾಂಪ್ರದಾಯಿಕವಾದ ವಾದ್ಯ, ಬ್ಯಾಂಡ್, ಚಂಡೆ, ಡೊಳ್ಳು ವಾದನಗಳು ಮಾತ್ರ ಇರಲಿವೆ. ಸ್ವಾಮೀಜಿಯವರು ಪಾಲ್ಗೊಳ್ಳುವ ಅಲಂಕೃತ ವಾಹನಗಳು ಮತ್ತು ಕೆಲವು ಟ್ಯಾಬ್ಲೋಗಳಿಗೆ ಮಾತ್ರ ಅವಕಾಶ ನೀಡಲು ರವಿವಾರ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಕೆ.ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಣಯ ಕೈಗೊಂಡಿದೆ.
ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳದೆ ನೇರ ಪ್ರಸಾರದಲ್ಲಿ ವೀಕ್ಷಿಸಬೇಕು. ಮೆರವಣಿಗೆ ಸಾಗುವ ಇಕ್ಕೆಲಗಳಲ್ಲಿ ನೂಕುನುಗ್ಗಲು ಮಾಡಬಾರದು. ಪಾಲ್ಗೊಳ್ಳುವವರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದು ಸಮಿತಿಯವರು ವಿನಂತಿಸಿದ್ದಾರೆ.
Comments are closed.