ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಮೇಕೆದಾಟು ಪಾದಯಾತ್ರೆ ಮುಂದುವರಿಸುವುದರ ಅಗತ್ಯವೇನು ಎಂದು ಪ್ರಶ್ನಿಸಿ ಹೈಕೋರ್ಟ್ ಛೀಮಾರಿ ಹಾಕಿದ ನಂತರ, ಹೈಕಮಾಂಡ್ ಸೂಚನೆಯಂತೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಕೈಗೊಂಡಿದ್ದ ಪಾದಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ.
ಇಂದು ರಾಮನಗರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸದ್ಯಕ್ಕೆ ಮೇಕೆದಾಟು ಪಾದಯಾತ್ರೆಯನ್ನು ಮೊಟಕುಗೊಳಿಸಿ ಕೊರೋನಾ ಸೋಂಕು ತಗ್ಗಿದ ನಂತರ ಮತ್ತೆ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಗಿದೆ.
ಈ ಮೂಲಕ ಕಾಂಗ್ರೆಸ್ ನಾಯಕರ 11 ದಿನಗಳ ಮೇಕೆದಾಟು ಪಾದಯಾತ್ರೆ 5ನೇ ದಿನಕ್ಕೆ ಅಂತ್ಯವಾಗಿದೆ. ಸರ್ಕಾರದ ಆದೇಶ ಮತ್ತು ಹೈಕೋರ್ಟ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಂದು ರಾಮನಗರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪಾದಯಾತ್ರೆಯನ್ನು ಕೊನೆಗೊಳಿಸುವ ಬಗ್ಗೆಯೇ ಹೆಚ್ಚಿನ ನಾಯಕರು ಒಲವು ವ್ಯಕ್ತಪಡಿಸಿದ್ದರಿಂದ ಇಂದಿಗೆ ಪಾದಯಾತ್ರೆ ಕೊನೆಯಾಗಲಿದೆ.
ಇಂದು ಬೆಳಗ್ಗೆ ರಾಮನಗರದಿಂದ ಪಾದಯಾತ್ರೆ ಮುಂದುವರಿಯಬೇಕಿತ್ತು. ಕಲಾತಂಡಗಳ ಸುಮಾರು 300 ಕಲಾವಿದರು ರಾಮನಗರದಲ್ಲಿ ಕಾದು ಕುಳಿತಿದ್ದರು. ಆದರೆ ಹೈಕೋರ್ಟ್ ಆದೇಶ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದು ಮನವಿ ಮಾಡಿಕೊಂಡ ನಂತರ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಬಾರದು ಎಂದು ಪಾದಯಾತ್ರೆ ಮೊಟಕುಗೊಳಿಸಲಾಗಿದೆ. ಕೊರೋನಾ ಕಡಿಮೆಯಾದ ನಂತರ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.
Comments are closed.