ಕರ್ನಾಟಕ

ವಾಮಾಚಾರ ನಡೆಸಿ ನಿಧಿಗಾಗಿ ಶೋಧ, ದೊಡ್ಡ ಬಲಿಪೂಜೆಗೂ ನಡೆದಿತ್ತು ಸಿದ್ಧತೆ; ಇಬ್ಬರ ಬಂಧನ

Pinterest LinkedIn Tumblr

ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಸಿದ್ದಾಪುರ ಚೆನ್ನಯ್ಯನಕೋಟೆ ಹೊಳಮಾಳ ಗ್ರಾಮದಲ್ಲಿ ವಾಮಾಚಾರ ನಡೆಸಿ ನಿಧಿ ಶೋಧನೆ ನಡೆಸುತ್ತಿದ್ದ ವ್ಯಕ್ತಿಗಳಿಬ್ಬರನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ಹಾಗೂ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಖಚಿತ ಮಾಹಿತಿ ಮೇರೆಗೆ ಸಿದ್ದಾಪುರ ಚೆನ್ನಯ್ಯನಕೋಟೆ ಹೊಳಮಾಳ ಗ್ರಾಮದ ಕೋಟೆ ಪೈಸಾರಿಯ ಎಂ.ಆರ್ ಗಣೇಶ್ ಎಂಬವರ ಮನೆಗೆ ದಾಳಿ ನಡೆಸಿದ ಡಿಸಿಐಬಿ ಹಾಗೂ ಸಿದ್ದಾಪುರ ಪೊಲೀಸರು ವಾಮಾಚಾರ ನಡೆಸಿ ನಿಧಿ ಶೋಧನೆಯಲ್ಲಿ ತೊಡಗಿದ್ದ ಎಂ.ಆರ್ ಗಣೇಶ್ ಹಾಗೂ ಉಡುಪಿ ಮೂಲದ ಸಾಧಿಕ್ ಎಂಬವರುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳ ವಿವರ

ಕೊಡಗಿನ ಸಿದ್ದಾಪುರ ಚೆನ್ನಯ್ಯನಕೋಟೆ ಮೂಲದವನಾದ ಸೆಂಟ್ರಿಂಗ್ ಕೆಲಸ ಮಾಡುವ ಎಂ.ಆರ್ ಗಣೇಶ್ (23), ಉಡುಪಿ ಜಿಲ್ಲೆ ಪಡುಬಿದ್ರಿ ಹಂಚಿನಡ್ಕದ ಸಾಧಿಕ್ ಬಿ.ಕೆ (42) ಬಂಧಿತ ಆರೋಪಿಗಳು.

ಆರೋಪಿಗಳಿಬ್ಬರು ಮಂಗಳೂರು ಹಾಗೂ ಕೇರಳ ಮೂಲದ ವಾಮಾಚಾರಿಗಳ ಬಲೆಗೆ ಬಿದ್ದು ಮೌಡ್ಯತೆಯಿಂದ ಮನೆಯ ಬೆಡ್ ರೂಂನ ಮಣ್ಣಿನಡಿಯಲ್ಲಿ ನಿಧಿ ಇದೆಯೆಂದು ಸುಮಾರು 15 ಅಡಿಗಳಷ್ಟು ಮಣ್ಣು ತೆಗೆದು ಗುಂಡಿತೋಡಿದ್ದರು.

ನಿಧಿ ಶೋಧನೆಯ ಸಂಬಂಧ ಕೋಳಿ ಬಲಿ ಪೂಜೆ ನಡೆಸಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಬಲಿ ಪೂಜೆ ನಡೆಸಲು ನಿರ್ಧರಿಸಲಾಗಿತ್ತೆಂದು ಆರೋಪಿ ವ್ಯಕ್ತಿಗಳಿಂದ ತಿಳಿದುಬಂದಿದ್ದು ಮುಂದೆ ನಡೆಯಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. ಅಲ್ಲದೇ ಮೌಡ್ಯತೆಯಿಂದ ಇನ್ನೂ ಕೆಲವು ಅಡಿಗಳಷ್ಟು ಮಣ್ಣು ತೆಗೆದಿದಲ್ಲಿ ಮನೆ ಕುಸಿದು ಮನೆಯಲ್ಲಿದ್ದವರೆಲ್ಲ ಸಾವನ್ನಪ್ಪುವ ಸಾಧ್ಯತೆಯಿತ್ತು. ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಕಾರ್ಯಮುಂದುವರಿದಿದೆ.

ಆರೋಪಿಗಳ ವಿರುದ್ದ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಾಮಾಚಾರಕ್ಕೆ ಬಳಸಿದ ಕೆಲವು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಗುಪ್ತದಳ ಇನ್ಸ್ ಪೆಕ್ಟರ್ ಐ.ಪಿ ಮೇದಪ್ಪ, ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ವಿ ವೆಂಕಟೇಶ್ ಹಾಗೂ ಡಿಸಿಐಬಿ ಸಿಬ್ಬಂದಿಗಳಾದ ವೆಂಕಟೇಶ್, ಯೊಗೇಶ್ ಕುಮಾರ್, ನಿರಂಜನ್, ವಸಂತ, ಸುರೇಶ್, ಶರತ್ ರೈ, ಶಶಿಕುಮಾರ್ ಮತ್ತು ಅಭಿಲಾಷ್ ಹಾಗೂ ಸಿದ್ದಾಪುರ ಠಾಣೆಯ ಎಎಸ್ಐ ಮೊಹಿದ್ದೀನ್, ಸಿಬ್ಬಂದಿಗಳಾದ ಬೆಳಿಯಪ್ಪ, ಲಕ್ಷೀಕಾಂತ್, ಮಲ್ಲಪ್ಪ, ಶಿವಕುಮಾರ್ ಹಾಗೂ ಸಿಡಿಆರ್ ಸೆಲ್ ನ ರಾಜೇಶ್, ಗಿರೀಶ್, ಪ್ರವೀಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಇವರ ಕಾರ್ಯವನ್ನು ಎಸ್ಪಿ ಪ್ರಶಂಸಿಸಿದ್ದಾರೆ.

Comments are closed.