ಕರಾವಳಿ

ವೀಕೆಂಡ್ ಕರ್ಫ್ಯೂ; ದ.ಕ. ಜಿಲ್ಲೆಯಲ್ಲಿ ಮದುವೆ, ಯಕ್ಷಗಾನ ಸಹಿತ ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ಅವಕಾಶವಿದೆ- ಡಿಸಿ ಡಾ| ರಾಜೇಂದ್ರ ಕೆ.ವಿ.

Pinterest LinkedIn Tumblr

ಮಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿಧಿಸಿರುವ ವೀಕೆಂಡ್‌ ಕರ್ಫ್ಯೂನಲ್ಲಿ ದ.ಕ. ಜಿಲ್ಲೆಯಲ್ಲಿ ಈ ವಾರಾಂತ್ಯದಲ್ಲಿ ಮದುವೆ, ಯಕ್ಷಗಾನ ಸೇರಿದಂತೆ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರಲಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.
ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸ್ಥಿತಿ ಹಾಗೂ ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಒಳಾಂಗಣದಲ್ಲಿ 100 ಹಾಗೂ ಹೊರಾಂಗಣದಲ್ಲಿ 200 ಜನರಿಗೆ ಸೀಮಿತಗೊಳಿಸಿ ಕಾರ್ಯಕ್ರಮ ನಡೆಸಬಹುದಾಗಿದೆ. ಈ ಕ್ರಮ ಈ ವಾರಕ್ಕೆ ಮಾತ್ರ ಅನ್ವಯವಾಗುತ್ತದೆ. ಮುಂದಿನ ವಾರ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ವಾರಾಂತ್ಯ ಸಂದರ್ಭ ಸುಬ್ರಹ್ಮಣ್ಯ, ಕಟೀಲು, ಧರ್ಮಸ್ಥಳ ಕ್ಷೇತ್ರ ಸೇರಿದಂತೆ ಎಲ್ಲ ದೇವಾಲಯ ಹಾಗೂ ಚರ್ಚ್‌, ಮಸೀದಿಗಳಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನಿಗದಿತ ಸಮಯದಲ್ಲೇ ಮಾಡಬೇಕಾದ ಕೆಲವೊಂದು ಸಾಂಪ್ರದಾಯಿಕ ಕಾರ್ಯಕ್ರಮಗಳಿದ್ದಲ್ಲಿ ಅವುಗಳನ್ನು ಸರಕಾರದ ಮಾರ್ಗಸೂಚಿಯಲ್ಲಿ ತಿಳಿಸಿದಂತೆ ಸೀಮಿತಗೊಳಿಸಿ ನಡೆಸಬಹುದಾಗಿದೆ ಎಂದರು.

ವಾರಾಂತ್ಯ ಕರ್ಫ್ಯೂ ವೇಳೆ ಶಾಲಾ ಕಾಲೇಜುಗಳು ಬಂದ್‌ ಆಗಲಿವೆ. ಆದರೆ ಪೂರ್ವನಿಗದಿತ ಪರೀಕ್ಷೆಗಳಿದ್ದಲ್ಲಿ ನಡೆಸಬಹುದಾಗಿದೆ. ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ನೊಂದಿಗೆ ಪ್ರಯಾಣ ಮಾಡಬಹುದು. ದೂರದ ಊರುಗಳಿಗೆ ಹೋಗುವವರು ಬಸ್‌, ರೈಲು ಅಥವಾ ವಿಮಾನ ಯಾನದ ಟಿಕೆಟ್‌ನೊಂದಿಗೆ ಕರ್ಫ್ಯೂ ಸಂದರ್ಭ ಸಂಚರಿಸಲು ಅವಕಾಶವಿದೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ವೈದ್ಯಕೀಯ ಪರಿಣಿತರು, ಮಾಲ್‌, ಬಸ್‌, ಹೊಟೇಲ್‌-ರೆಸ್ಟೋರೆಂಟ್‌ ಮಾಲಕರ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಡಿಸಿ ತಿಳಿಸಿದರು.

ಜಿಲ್ಲೆಯಲ್ಲಿ ಈ ಹಿಂದೆ ಸಕ್ರಿಯವಾಗಿದ್ದ ಕೋವಿಡ್‌ ಕೇರ್‌ ಸೆಂಟರ್‌, ಕೋವಿಡ್‌ ಕಂಟ್ರೋಲ್‌ ರೂಂಗಳನ್ನು ಹಾಗೂ ಕೋವಿಡ್‌ ಸಂದರ್ಭ ರಚಿಸಲಾದ ಸುರಕ್ಷಾ ತಂಡಗಳನ್ನು ಸಕ್ರಿಯಗೊಳಿಸಲಾಗುತ್ತಿದೆ. ಗಡಿ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಪಾಸಣ ಸಂಖ್ಯೆಯನ್ನು ಹೆಚ್ಚಿಸಲು ಸೂಚಿಸಲಾಗಿದೆ. ದಿನವೊಂದಕ್ಕೆ ಜಿಲ್ಲೆಯಲ್ಲಿ 15,000 ಕೋವಿಡ್‌ ತಪಾಸಣೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಅವರು ಹೇಳಿದರು.

Comments are closed.