ಉಡುಪಿ: ಕೋಟ ಠಾಣಾ ವ್ಯಾಪ್ತಿಯ ಕೋಟತಟ್ಟು ಕೊರಗ ಸಮುದಾಯದ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅಮಾಯಕರ ಮೇಲೆಯೇ ಪ್ರತಿ ದೂರು ನೀಡಿದ್ದನ್ನು 10 ದಿನದೊಳಗೆ ಹಿಂಪಡೆಯದೇ ಇದ್ದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ತೀರ್ಮಾನಿಸಲಾಗಿದೆ ಎಂದು ಕೊರಗ ಮುಖಂಡ ವಿ.ಗಣೇಶ್ ಕುಂದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ವಿ. ಗಣೇಶ್ ಕೊರಗ)
ಕೊರಗ ಕಾಲನಿಯಲ್ಲಿ ನಡೆದ ಮೆಹಂದಿಯ ದಿನ ಪೊಲೀಸರು ನಡೆಸಿದ ದಾಂಧಲೆ ಹಾಗೂ ಅನಂತರ ಅಮಾಯಕ ಕೊರಗರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಜ. ರಂದು ಮಾನ್ಯ ಗೃಹ ಸಚಿವರು, ಸಮಾಜ ಕಲ್ಯಾಣ ಸಚಿವರೊಂದಿಗೆ ಕಾಲನಿಗೆ ಬಂದು ಮಾತುಕತೆ ನಡೆಸಿದರು. ಪೊಲೀಸರು ದಾಖಲಿಸಿದ್ದನ್ನು ಸುಳ್ಳು ಪ್ರಕರಣವೆಂದು ಮಾಧ್ಯಮಗಳೆದುರು ಒಪ್ಪಿಕೊಂಡು ಆ ಸುಳ್ಳು ಪ್ರಕರಣಗಳನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಹಾಗೂ ತಪ್ಪಿತಸ್ಥ ಪೊಲೀಸರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ. ಜೊತೆಗೆ ಸಂತ್ರಸ್ತರಿಗೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದರು. ಅಲ್ಲದೆ ಪ್ರಕರಣವನ್ನು ಸಿಓಡಿಗೆ ಒಪ್ಪಿಸುವುದಾಗಿ ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಿಂದಾಗಿ ಮಾನ್ಯ ಗೃಹ ಸಚಿವರ ಮೇಲೆ ನಂಬಿಕೆ ಇಟ್ಟು, ನಾವು ಮಾಡಲು ಉದ್ದೇಶಿಸಿರುವ ಪ್ರತಿಭಟನಾ ಮೆರವಣಿಗೆಯನ್ನು ಹತ್ತು ದಿನಗಳವರೆಗೆ ಕಾದು ನೋಡುವ ಚಿಂತನೆ ನಡೆಸಿದ್ದೇವೆ. ಹತ್ತು ದಿನಗಳವರೆಗೂ ಕೊರಗರ ಮೇಲಿನ ಪ್ರಕರಣಗಳನ್ನು ಹಿಂದೆ ಪಡೆಯದಿದ್ದರೆ ಪೂರ್ವ ನಿರ್ಧಾರದಂತೆಯೇ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ತೀರ್ಮಾನಿಸುತ್ತೇವೆ ಎಂದು ವಿ.ಗಣೇಶ್ ಕುಂದಾಪುರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Comments are closed.