ನಾನು ಕೊರಗರ ಜೊತೆ ಮೂಟೆ ಹೊತ್ತವನು; ಅವರಿಗೆ ಅನ್ಯಾಯ ಆಗಲು ಬಿಡಲ್ಲ: ಆರಗ
(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟದ ಕೊರಗ ಕಾಲನಿಯಲ್ಲಿ ಮೆಹೆಂದಿ ಕಾರ್ಯಕ್ರಮದಲ್ಲಿ ಡಿಜೆ ಹಾಕಿದ್ದಕ್ಕೆ ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮಕೈಗೊಳ್ಳಲಾಗಿದೆ. ದಲಿತರು, ಕೆಳಸ್ತರದ ವ್ಯಕ್ತಿಗಳಿಗೆ ನೋವಾಗಬಾರದೆಂಬ ಬದ್ದತೆ ಇದೆ. ಪೊಲೀಸರು ಮಾಡಿದ ತಪ್ಪಿಗೆ ತಪ್ಪಿತಸ್ಥರು ಬೆಲೆತೆರಬೇಕು. ಈ ನಿಟ್ಟಿನಲ್ಲಿ ಸಿಓಡಿ ತನಿಖೆಗೆ ಪ್ರಕರಣ ರವಾನಿಸಲಾಗುತ್ತದೆ. ಕೊರಗರು ಅನೇಕ ಸಮಸ್ಯೆಗಳನ್ನು ಹೇಳಿದ್ದು ಅದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಜಾಗರುಕತೆ ವಹಿಸಲಾಗುತ್ತದೆ. ಪೊಲೀಸರು ನೊಂದವರ ಮೇಲೆ ಹಾಕಿದ ಕೇಸು ಸುಳ್ಳು ಎಂಬುದು ಅರಿವಿದ್ದು ಇದರ ಬಗ್ಗೆ ತನಿಖೆ ನಡೆಯುತ್ತದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕಳೆದ ಸೋಮವಾರ ಕೋಟತಟ್ಟು ಬಾರಿಕೆರೆ ಕೊರಗ ಕಾಲನಿಯಲ್ಲಿ ಮೆಹೆಂದಿ ವೇಳೆ ಪೊಲೀಸರಿಂದ ಹಲ್ಲೆಗೊಳಗಾದ ಕೊರಗ ಸಮುದಾಯದವರನ್ನು ಭೇಟಿಮಾಡಿ ಅವರು ಮಾತನಾಡಿದರು.
ತಳಮಟ್ಟದ ಸಮುದಾಯದ ಯಾರು ಹೆದರುವ ಅಗತ್ಯವಿಲ್ಲ, ನಾವಿದ್ದೇವೆ, ಸರಕಾರವಿದೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಬ್ಬರ ಅಮಾನತು ಮಾಡಲಾಗಿದೆ. ಉಳಿದವರ ವರ್ಗಾವಣೆ ಮಾಡಲಾಗಿದ್ದು ಮುಂದಿನ ಕ್ರಮದ ಬಗ್ಗೆ ಅವಲೋಕನ ಮಾಡಲಾಗುತ್ತದೆ. ಈ ಪ್ರಕರಣವನ್ನು ನಾನು ಸಿಒಡಿಗೆ ನೀಡುತ್ತೇವೆ. ಈ ಪ್ರಕರಣಕ್ಕೆ ಸಂಬಂದಪಟ್ಟವರು ತನಿಖೆ ನಡೆಸುವುದರಿಂದ ನ್ಯಾಯ ಸಿಗಲಿದೆ. ಪ್ರಕರಣದ ತನಿಖೆ ಕೂಲಂಕುಷವಾಗಿ ನಡೆಯಲಿದೆ. ಘಟನೆ ನಡೆದ 2-3 ದಿನದ ಮೇಲೆ ಪೊಲೀಸ್ ಸಿಬ್ಬಂದಿ ಕೊರಗರು ಸಹಿತ ಇನ್ನು ಕೆಲವರ ಮೇಲೆ ಕೇಸು ದಾಖಲಿಸಿದ್ದು ಇದೊಂದು ಸುಳ್ಳು ಪ್ರಕರಣ ಎಂದು ಎಲ್ಲರಿಗೂ ತಿಳಿಯುತ್ತದೆ. ಸಬ್ ಇನ್ಸ್‌ಪೆಕ್ಟರ್ ತಾನೇ ಸುಪ್ರೀಂ ಎಂದುಕೊಂಡು ಅಂದಿನ ಘಟನೆ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸದೇ ಇರುವುದು ನಿಜಕ್ಕೂ ತಪ್ಪನ್ನು ತೋರಿಸುತ್ತದೆ.
ಮನಸ್ಸಿಗೆ ಆದ ನೋವು ನಿವಾರಿಸಲು ಆಗಲ್ಲ. ಆದರೆ ಆದ ತಪ್ಪಿಗೆ ಪ್ರಕರಣದ ಸಂತ್ರಸ್ತರಿಗೆ 6 ಮಂದಿಗೆ ಸರಕಾರದಿಂದ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದು ಮುಂಗಡವಾಗಿ 50 ಸಾವಿರ ಪರಿಹಾರ ಮೊತ್ತ ನೀಡಿದ್ದೇವೆ ಎಂದರು.
ಪೊಲೀಸರು ರೌಡಿ ಕೆಲಸ ಮಾಡಬಾರದು. ಇಲಾಖೆಗೆ ಕಪ್ಪು ಚುಕ್ಕೆ ತರುವ ಕೆಲಸ ಇಲಾಖೆಯಿಂದ ಆಗಿದ್ದಕ್ಕೆ ನೋವಾಗಿದೆ. ರಾಜ್ಯದಲ್ಲಿ 1 ಲಕ್ಷದಷ್ಟು ಪೊಲೀಸರಿದ್ದು ಅವರಲ್ಲಿರುವ ಒಳ್ಳೆ ಪೊಲೀಸರಿಗೆ ಅವಮಾನವಾಗುವ ಕೆಲಸ ಮಾಡುವ ಕೆಲವು ಪೊಲೀಸರಿಂದ ಹೀಗಾಗುತ್ತಿದೆ. ಅವರು ಪೊಲೀಸ್ ಇಲಾಖೆಗೆ ಯೋಗ್ಯರೋ ಇಲ್ಲವೋ ಎಂಬುದನ್ನು ಸರಕಾರ ನಿರ್ಧರಿಸುತ್ತದೆ.
ಪೊಲೀಸರ ಭಾಷಾ ಪ್ರಯೋಗದ ಬಗ್ಗೆಯೂ ಗಮನಕ್ಕಿದ್ದು ಅದಕ್ಕೂ ತಕ್ಕ ಶಿಕ್ಷೆಯಾಗುತ್ತದೆ ಎಂದರು. ಕಾನೂನು ಎಲ್ಲರಿಗೂ ಒಂದೆ. ಅದನ್ನು ಅನುಷ್ಟಾನಕ್ಕೆ ತರುವುದು ಇಲಾಖೆ ಕರ್ತವ್ಯ. ಈ ಪ್ರಕರಣವನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಗಂಭೀರವಾಗಿ ಪರಿಗಣಿಸಿತ್ತದೆ ಎಂದರು.
ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಖಂಡರಾದ ಕಿರಣ್ ಕುಮಾರ್ ಕೊಡ್ಗಿ , ಉಡುಪಿ ಡಿಸಿ ಕೂರ್ಮಾರಾವ್ ಎಂ, ಎಸ್ಪಿ ವಿಷ್ಣುವರ್ಧನ್ ಮೊದಲಾದವರಿದ್ದರು.
Comments are closed.