ಕರಾವಳಿ

ಪಿಎಸ್ಐ ಕೊಲೆ ಯತ್ನ ದೂರು – ಇಬ್ಬರು ಆರೋಪಿಗಳ ಬಂಧನ

Pinterest LinkedIn Tumblr

ಉಪ್ಪಿನಂಗಡಿ: ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡ ಪಿಎಫ್‌ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ, ಡಿ.14ರಂದು ನಡೆದ ಪ್ರತಿಭಟನೆಯ ಸಂದರ್ಭ ನಡೆದ ಘಟನಾವಳಿಗಳಿಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣಾ ಉಪನಿರೀಕ್ಷಕ ಪ್ರಸನ್ನಕುಮಾರ್ ಕೊಲೆ ಯತ್ನ ದೂರಿಗೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಡಿ.14ರಂದು ಠಾಣೆ ಮುಂದೆ ಜಮಾಯಿಸಿದ್ದ ಗುಂಪು
ನೆಲ್ಯಾಡಿಯ ಜಾಫರ್ ಹಾಗೂ ಕೊಲ್ಪೆಯ ಮಹಮ್ಮದ್ ಆರೀಫ್ ಹುಸೇನ್ ಬಂಧಿತರು. ಇವರನ್ನು ಡಿಸೆಂಬರ್ 30ರಂದು ನೆಲ್ಯಾಡಿಯಲ್ಲಿ ಬಂಧಿಸಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಡಿಸೆಂಬರ್ 14ರಂದು ನಡೆದ ಘಟನೆಗೆ ಸಂಬಂಧಿಸಿ ದೂರು ನೀಡಿದ್ದ ಬಂಟ್ವಾಳ ಗ್ರಾಮದ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸನ್ನಕುಮಾರ್ , ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ದ ಗುಂಪು ಪೊಲೀಸರ ಮೇಲೆ ಹಲ್ಲೆ ನಡೆಸಿ ಠಾಣೆಯೊಳಗೆ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸನ್ನಿವೇಶ ಎದುರಾಗಿತ್ತು. ರಾತ್ರಿ 9.30 ರ ಸುಮಾರಿಗೆ ಅವರನ್ನು ಚದುರಿಸಲು ತಾನು ಸೇರಿದಂತೆ ಪೊಲೀಸರು ಬಂದೋಬಸ್ತ್ ನಿರತನಾಗಿದ್ದಾಗ , ಗುಂಪಿನಲ್ಲಿದ್ದವರು ನಮ್ಮ ಮೇಲೆಯೇ ದಾಳಿ ನಡೆಸಿದರು . ಈ ಸಂದರ್ಭ ಓರ್ವ ವ್ಯಕ್ತಿಯು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಚೂರಿಯಿಂದ ನನ್ನ ಹೊಟ್ಟೆಗೆ ತಿವಿಯಲು ಬಂದಿದ್ದು ಅದನ್ನು ತಡೆದಿದ್ದರಿಂದ ಅಂಗೈಯ ಗಾಯವಾಗಿದೆ. ಅಲ್ಲದೆ ಡಿವೈಎಸ್ಪಿ ಅವರ ಮೇಲೆಯೂ ಕಲ್ಲುತೂರಾಟ ನಡೆಸಿದ್ದಾರೆ. ಆತ್ಮರಕ್ಷಣೆಗೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು ಗುಂಪು ಸೇರಿದ್ದ ಜನರು ಸ್ಥಳದಿಂದ ಒಮ್ಮೆಲೆ ಒಬ್ಬರ ಮೇಲೊಬ್ಬರು ಪೊಲೀಸರ ಮೇಲೂ ಕಲ್ಲು ಸೋಡಾ ಬಾಟಲಿಗಳನ್ನು ತೂರಿದ್ದಾರೆ. ಅಲ್ಲದೆ ಪೊಲೀಸ್ ವಾಹನಕ್ಕೆ ಹಾನಿಗೊಳಿಸಿ ಸುಮಾರು 25 ಸಾವಿರ ರೂಪಾಯಿ ಇಲಾಖೆಗೆ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿದ್ದಾರೆ.

ಅದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Comments are closed.