ಕೋಲಾರ: ತೆಗೆದುಕೊಂಡ ಸಾಲಕ್ಕೆ ವಿಪರೀತ ಬಡ್ಡಿ ಕಟ್ಟಲಾಗದೆ ಬೇಸತ್ತು ನಿದ್ದೆ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಅತ್ತಗಿರಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀದೇವಮ್ಮ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮೊದಲು ತನಗಾದ ತೊಂದರೆ ಬಗ್ಗೆ ವಿಡಿಯೋ ಮಾಡಿದ್ದು ವಿಡಿಯೋದಲ್ಲಿ ಮೂವರ ವಿರುದ್ಧ ಆರೋಪ ಮಾಡಿದ್ದಾರೆ.
ಕೋಲಾರದಲ್ಲಿ ಮೀಟರ್ ಬಡ್ಡಿಕೋರರ ಕಿರುಕುಳ ತಾಳಲಾಗದೆ ನಿದ್ರೆ ಮಾತ್ರೆ ಸೇವಿಸಿ ಲಕ್ಷ್ಮೀದೇವಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಲಕ್ಷ್ಮೀದೇವಮ್ಮ ಬಂಗಾರಪೇಟೆ ಹಾಗೂ ಹುಲಿಬೆಲೆ ಗ್ರಾಮದ ಕೆಲವರ ಬಳಿ ಸಾಲ ಪಡೆದಿದ್ದರು. ಸಾಲ ತೀರಿಸದಿದ್ದಕ್ಕೆ ಮನಬಂದಂತೆ ಬಡ್ಡಿ ಹಾಗೂ ಮೀಟರ್ ಬಡ್ಡಿ ಹಣ ಕೇಳುತ್ತಿದ್ದರು. ಹಣ ಕೊಡದೇ ಇದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾರೆ ಎಂದು ಲಕ್ಷ್ಮೀದೇವಮ್ಮ ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಲಕ್ಷ್ಮೀದೇವಮ್ಮ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಸಂಬಂಧಿಕರು ಅವರನ್ನು ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಜೀವನ್ಮರಣ ಹೋರಾಟ ನಡೆಸಿದ ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಡಿಯೋ ಆಧರಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Comments are closed.