ಉಡುಪಿ: ಜಿಲ್ಲೆಯ ಬಾರ್ಕೂರು ಕೂಡ್ಲಿ ದುರ್ಗಾಪರಮೇಶ್ವರಿ ಗದ್ದುಗೆ ಮಾರಿಯಮ್ಮ ದೇವಸ್ಥಾನದ ಕ್ರಾಸ್ ಬಳಿ ಕಾರು ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದಾರೆ. ಮೃತರನ್ನು ಕಾರಿನಲ್ಲಿದ್ದ ಯು.ಬಿ.ಪ್ರಭಾಕರ್ ರಾವ್ ( 80) ಎಂದು ಗುರುತಿಸಲಾಗಿದೆ.
ಮಂದಾರ್ತಿ-ಬಾರ್ಕೂರು ಮುಖ್ಯ ರಸ್ತೆಯಲ್ಲಿ ಬಾರ್ಕೂರು ಕಡೆಗೆ ಹೋಗುತ್ತಿದ್ದ ಕಾರು, ತಿರುವು ಹಾಗೂ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಾಡಿಗೆ ನುಗ್ಗಿದೆ. ನಂತರ ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಅವಘಡ ದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಪ್ರಭಾಕರ್ ರಾವ್ ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಇವರೊಂದಿಗೆ ಕುಳಿತಿದ್ದ ಇವರ ಪತ್ನಿ ಉಷಾ ಪಿ.ರಾವ್ ತೀವ್ರ ಗಾಯಗೊಂಡಿದ್ದಾರೆ.
ಕಾರು ಚಾಲಕ ವಿಶ್ವ ಪ್ರಸಾದ್ ರಾವ್ ಮತ್ತು ಮುಂದಿನ ಸೀಟಿನಲ್ಲಿ ಕುಳಿತಿದ್ದ ಶಿವ ಪ್ರಸಾದ್ ರಾವ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.