ಕರ್ನಾಟಕ

ತಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವಿಧಿವಶ

Pinterest LinkedIn Tumblr

ಬೆಂಗಳೂರು: ತಮಿಳುನಾಡಿನ ಕೂನ್ನೂರು ಬಳಿ ಡಿಸೆಂಬರ್ 8ರಂದು ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬುಧವಾರ ವಿಧಿವಶರಾಗಿದ್ದಾರೆಂದು ಭಾರತೀಯ ವಾಯುಪಡೆ ಖಚಿತಪಡಿಸಿದೆ.

ಹೆಲಿಕಾಪ್ಟರ್ ದುರಂತದಲ್ಲಿ ಶೇಕಡಾ 45ರಷ್ಟು ಗಾಯಗೊಂಡಿದ್ದ ಪೈಲಟ್ ವರುಣ್ ಸಿಂಗ್ ಬದುಕುಳಿದಿದ್ದರು. ಅವರಿಗೆ ಆರಂಭದಲ್ಲಿ ತಮಿಳುನಾಡಿನ ವೆಲ್ಲಿಂಗ್ಟನ್ ನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ವಾರಗಳಿಂದ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದಾರೆ.

ಪ್ರಧಾನಿ ಮೋದಿ ಸಂತಾಪ..
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ರಾಷ್ಟ್ರಕ್ಕೆ ಹೆಮ್ಮೆ, ಶೌರ್ಯ ಮತ್ತು ಅತ್ಯಂತ ವೃತ್ತಿಪರತೆಯೊಂದಿಗೆ ಸೇವೆ ಸಲ್ಲಿಸಿದರು. ಅವರ ನಿಧನ ನನಗೆ ಅತೀವ ನೋವಾಗಿದೆ. ದೇಶಕ್ಕೆ ಅವರು ಸಲ್ಲಿಸಿದ ಉತ್ಕೃಷ್ಟ ಸೇವೆ ಎಂದಿಗೂ ಮರೆಯಲಾಗದು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಕಳೆದ ವಾರ ಕೂನ್ನೂರು ಬಳಿ ದುರಂತಕ್ಕೀಡಾಗಿ 13 ಮಂದಿ ಸಜೀವ ದಹನವಾಗಿದ್ದರು.

Comments are closed.