ನವದೆಹಲಿ: ಐತಿಹಾಸಿಕ, ಪುರಾತನ ಪವಿತ್ರ ಶಿವನ ದೇಗುಲ ಕಾಶಿ ವಿಶ್ವನಾಥ ಮಂದಿರದ ಸಂಕೀರ್ಣದಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿದೆ. ನಾಳೆ(ಡಿ.13) ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.

ಯೋಜನೆ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ಮೋದಿ ತಮ್ಮ ಸ್ವಕ್ಷೇತ್ರಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಭಕ್ತರಿಗೆ ಪಾದಾಚಾರಿ ವ್ಯವಸ್ಥೆ, ಹಲವು ಸಭಾಂಗಣ, ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯ, ಆಧ್ಯಾತ್ಮಿಕ ಗ್ರಂಥಾಲಯ, ವರ್ಚುವಲ್ ಗ್ಯಾಲರಿ ಸೇರಿದಂತೆ ಹಲವು ಕಾಮಾಗಾರಿಗಳನ್ನು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಈ ಯೋಜನೆ ಪೂರ್ಣಗೊಂಡಿದ್ದು, ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.
ಬರೋಬ್ಬರಿ 339 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಪೂರ್ಣಗೊಳಿಸಲಾಗಿದೆ. ಈ ಯೋಜನೆ ಮೋದಿ ಕನಸಿನ ಯೋಜನೆಯಾಗಿದೆ. ಐತಿಹಾಸಿಕ ದೇಗುಲ ಹಾಗೂ ಅದರ ಸುತ್ತಲಿನ ಸಂಕೀರ್ಣದಲ್ಲಿ ಈ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ವಿಶೇಷ ಅಂದರೆ ದೇವಾಲಯದ ಪರಂಪರೆ ಹಾಗೂ ಸಂಸ್ಕೃತಿಗೆ ಯಾವುದೇ ಧಕ್ಕೆ ಬರದ ರೀತಿಯಲ್ಲಿ ಕಾಶಿ ವಿಶ್ವನಾಥ ದೇಗುಲದ ಗತವೈಭವವನ್ನು ಪುನರ್ ನಿರ್ಮಿಸಲಾಗಿದೆ.
ಕಾರಿಡಾರ್ ಯೋಜನೆ ವಾಸ್ತುಶಿಲ್ಪ, ವಿನ್ಯಾಸ ಎಲ್ಲವನ್ನೂ ಖುದ್ದು ಮೋದಿ ಮಾರ್ಗದರ್ಶನದಲ್ಲಿ ಮಾಡಲಾಗಿದೆ. 5,000 ಹೆಕ್ಟೇರ್ ಪ್ರದೇಶದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ತಲೆ ಎತ್ತಿದೆ. ಭೂಸ್ವಾದೀನ ಪಡಿಸಿದ ಬಳಿಕ 300ಕ್ಕೂ ಹೆಚ್ಚು ಕಟ್ಟಡಗಳನ್ನು ಕೆಡವಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಾಶಿ ವಿಶ್ವನಾಥ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಇದೀಗ ಎಲ್ಲಾ ಸೌಲಭ್ಯಗಳು ಸಿಗಲಿದೆ. ದೇಗುಲದ ಸಂಕೀರ್ಣದಲ್ಲಿ ಧ್ಯಾನ, ಆಧ್ಯಾತ್ಮಿಕ ಸಭೆ ಸಮಾರಂಭ ನಡೆಸಬಹುಗುದಾದ ಸಭಾಂಗಣವನ್ನು ನಿರ್ಮಿಸಲಾಗಿದೆ. ಇದೀಗ ಕಾಶಿ ವಿಶ್ವನಾಥ ಮಂದಿರದ ಗತ ವೈಭವ ಮರುಕಳಿಸಿದೆ.
ಕಾಶೀ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂತಸ ಹಂಚಿಕೊಂಡಿದ್ದಾರೆ. ಕಾಶಿ ವಿಶ್ವನಾಥ ಮಂದಿರ ಆಧ್ಯಾತ್ಮಿಕ ಚೈತನ್ಯದ ಕೇಂದ್ರ. ನಾಳೆ ದೇಶದಲ್ಲಿ ಅತೀ ಸಂಭ್ರಮದ ದಿನ. ಐತಿಹಾಸಿಕ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆ ನಡೆಯಲಿದೆ. ಎಲ್ಲರೂ ನಾಳಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಮೋದಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
Comments are closed.