ಕರಾವಳಿ

ಕುಂದಾಪುರದ ‘ಬುದ್ದನ ಜೆಡ್ಡಿ’ಗೆ ವರಜ್ಯೋತಿ ಬಂತೇಜಿ ಭೇಟಿ: ಪುರಾತನ ಸ್ಥಳದಲ್ಲಿ ಬೋಧಿ ವೃಕ್ಷಕ್ಕೆ ವಂದನೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ‘ಬುದ್ದನ ಜೆಡ್ಡು’ ಎಂಬ ಪುರಾತನ ಸ್ಥಳಕ್ಕೆ ಅಣದೂರು ಬುದ್ಧವಿಹಾರದ ಪೂಜ್ಯ ವರಜ್ಯೋತಿ ಬಂತೇಜಿಯವರು ಶನಿವಾರ ಮಧ್ಯಾಹ್ನ ಭೇಟಿ ನೀಡಿದರು.

ಇದು 1800-2000 ವರ್ಷ ಇತಿಹಾಸವುಳ್ಳ ಸ್ಥಳವಾಗಿದೆ ಎಂದು ಅಭಿಪ್ರಾಯಪಟ್ಟ ಅವರು ಕಲ್ಲು ಪಾರೆ ಮೇಲಿರುವ ಜಿಂಕೆಗಳೆರಡರ ಗುರುತು, ಮಾನವ ರೇಖಾಚಿತ್ರ, ಪಾದದ ಗುರುತುಗಳನ್ನು, ಅಷ್ಟಾಂಗ ಚಕ್ರ ಸಹಿತ ಬುದ್ಧ ಧರ್ಮದ ವಿವಿಧ ಕುರುಹುಗಳನ್ನು ವೀಕ್ಷಿಸಿದ ಬಂತೇಜಿಯವರು ಬೋಧಿ ವೃಕ್ಷಕ್ಕೆ ಬೋಧಿ ವಂದನೆ ನೆರವೇರಿಸಿದರು. ಭಗವಾನ್ ಬುದ್ಧರು ಬೋಧಿಸಿದ ಅಷ್ಟಾಂಗ ಮಾರ್ಗದ ಚಕ್ರಗಳು, ಜಿಂಕೆ ವನ ಹಾಗೂ ಇಲ್ಲಿನ ಕುರುಹುಗಳನ್ನು ಗಮನಿಸಿದರೆ ಬೌದ್ಧ ಬಿಕುಗಳು ಧ್ಯಾನ ಮಾಡಿದ ಶೃದ್ಧಾ ಕೇಂದ್ರವಾಗಿರಬಹುದೆಂದು ಎಂದು ಬಣ್ಣಿಸಿದರು. ಸರಕಾರ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮತ್ತು ಪುರಾತತ್ವ ಇಲಾಖೆ ಇಲ್ಲಿ ಸಂಶೋಧನೆ ನಡೆಸಿ ಜಗತ್ತಿಗೆ ಇಲ್ಲಿನ ಮಹತ್ವ ಸಾರಬೇಕು ಎಂದರು.

ಬೌದ್ದರು ಶಾಂತಿ, ಪ್ರಶಾಂತ ಪ್ರಿಯರು. ಬೌದ್ದ ಧರ್ಮದ ಪ್ರಕಾರದಲ್ಲಿ ಇಲ್ಲಿನ ಚಿತ್ರಣವಿದೆ. ಒಂದೇ ಒಂದು ಮರಕ್ಕೂ ಹಾನಿ ಮಾಡಿಲ್ಲ.‌ ಜಿಂಕೆಗೆ ಅಭಯದಾನ ಮಾಡಿದವರು ಬುದ್ದ. ಎರಡು ಜಿಂಕೆಗಳ ಆಕೃತಿ ಇದಕ್ಕೆ ಪೂರಕವಾಗಿದೆ. ಬನವಾಸಿಯಲ್ಲಿ ಸಾವಿರಾರು ಬೌದ್ದ ಬಿಕುಗಳಿದ್ದು ಅಲ್ಲಿಂದ ಶ್ರೀಲಾಂಕದಲ್ಲಿ ನಡೆದ ಸಮ್ಮೇಳನಕ್ಕೆ ಬಂದಿದ್ದರು ಎಂದು ಸಾಹಿತ್ಯಿಕವಾಗಿ ದಾಖಲೆಗಳಿದೆ. ಬನವಾಸಿ ಕೂಡ ಅರಣ್ಯ ಪ್ರದೇಶವಾಗಿದ್ದು ಅಲ್ಲಿಯೂ ಇಂತಹ ದಾಖಲೆಗಳು ಇದ್ದಿರಬಹುದೆಂದು ತಿಳಿಸಿದರು. ಇಲ್ಲಿಗೆ ಆಗಮಿಸಿದ್ದರಿಂದ ಇದೊಂದು ಸಾರ್ಥಕ ದಿನ ಎಂದು ಸಂಭ್ರಮಿಸಿದ ಅವರು ತನ್ನನ್ನು ಇಲ್ಲಿಗೆ ಕರೆತಂದಿದ್ದಕ್ಕೆ ಮುಖಂಡ ಉದಯ್ ಕುಮಾರ್ ತಲ್ಲೂರು ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಅ.15ರಂದು ‘ಬುದ್ದನ ಜೆಡ್ಡಿಗೆ ನಮ್ಮ ನಡಿಗೆ’ ಹೆಸರಿನಲ್ಲಿ ಕಾರ್ಯಕ್ರಮ ನಡೆದಿದ್ದು ಈ ಸ್ಥಳ ಕುರಿತು ಬೆಳಕು ಚೆಲ್ಲುವ ಕಾರ್ಯದ ಬಗ್ಗೆ ಬಂತೇಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ರಾಜ್ಯ ಸಂಚಾಲಕರಾದ ಉದಯ್ ಕುಮಾರ್ ತಲ್ಲೂರು, ರಾಜ್ಯ ಸಂಘಟನಾ ಸಂಚಾಲಕರಾದ ನಾಗಣ್ಣ ಕಲ್ಲದೇವನಹಳ್ಳಿ, ತಾಲೂಕು ಸಂಘಟನಾ ಸಂಚಾಲಕ ಕೆ.ಎಸ್ ವಿಜಯ ಕುಂದಾಪುರ, ಚಂದ್ರಮ ತಲ್ಲೂರು ಇದ್ದರು.

Comments are closed.