ಕರಾವಳಿ

ಮಂಗಳೂರು: ಆರೋಗ್ಯ ಇಲಾಖೆ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ಪ್ರಕರಣ- ವೈದ್ಯ ಡಾ.ರತ್ನಾಕರ್ ಬಂಧನ

Pinterest LinkedIn Tumblr

ಮಂಗಳೂರು: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ದ.ಕ. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ರತ್ನಾಕರ್ ಅವರ ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆಯೇ ರತ್ನಾಕರ ಅವರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಡಾ.ರತ್ನಾಕರ್ ವಿರುದ್ದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಅಧಿಕಾರಿಯಿಂದ ಕಿರುಕುಳಕ್ಕೊಳಗಾದ ಮಹಿಳೆಯರು ದೂರು ನೀಡಲು ನಿರಾಕರಿಸಿದ್ದು ತನಿಖೆಯ ಸಮಯದಲ್ಲಿ ಮಹಿಳೆಯರು ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ ಡಾ. ರತ್ನಾಕರ್ ರನ್ನು ನ.8ರಿಂದ ಅನ್ವಯಗೊಳ್ಳುವಂತೆ ಅಮಾನತಿನಲ್ಲಿಡಲಾಗಿದೆ ಎಂದು ತಿಳಿದುಬಂದಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಜಿಲ್ಲಾ ಆಯುಷ್ಮಾನ್ ನೋಡಲ್ ಅಧಿಕಾರಿ, ಕುಷ್ಠರೋಗ ನಿವಾರಣಾ ವಿಭಾಗದ ಅಧಿಕಾರಿಯೂ ಆಗಿರುವ ಡಾ. ರತ್ನಾಕರ್ ಕೆಲವು ತಿಂಗಳ ಹಿಂದೆ ಸರಕಾರಿ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಲಾಗಿದೆ. ಈ ಮಧ್ಯೆ ಸಂತ್ರಸ್ಥೆ ಯುವತಿಯ ಪರವಾಗಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಮಹಿಳೆಯೊಬ್ಬರು ಶುಕ್ರವಾರ ನೀಡಿದ ದೂರನ್ನು ದಾಖಲಿಸಿಕೊಂಡ ಮಹಿಳಾ ಪೊಲೀಸರು ಆರೋಪಿ ಅಧಿಕಾರಿ ಡಾ.ರತ್ನಾಕರ್‌ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

Comments are closed.